×
Ad

ಅಸಾಂಜ್ ಸ್ವತಂತ್ರವಾಗಿ ಹೊರಹೋಗಲು ಬಿಡಿ, ಮೂರೂವರೆ ವರ್ಷದ ‘ಬಂಧನ’ಕ್ಕೆ ಪರಿಹಾರ ನೀಡಿ: ವಿಶ್ವಸಂಸ್ಥೆಯ ಸಮಿತಿ

Update: 2016-02-05 19:00 IST

ಜಿನೇವ, ಫೆ. 5: ಲಂಡನ್‌ನ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿರುವ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ಗೆ ಮುಕ್ತವಾಗಿ ಹೊರ ಹೋಗಲು ಅವಕಾಶ ನೀಡಬೇಕು ಹಾಗೂ ಅವರ ಮೂರೂವರೆ ವರ್ಷಗಳ ‘ಬಂಧನ’ಕ್ಕೆ ಪರಿಹಾರ ನೀಡಬೇಕು ಎಂದು ವಿಶ್ವಸಂಸ್ಥೆಯ ಸಮಿತಿಯೊಂದು ಶುಕ್ರವಾರ ತೀರ್ಪು ನೀಡಿದೆ.
ಅಮೆರಿಕದ ಲಕ್ಷಾಂತರ ರಹಸ್ಯ ರಾಜತಾಂತ್ರಿಕ ಕೇಬಲ್‌ಗಳು ಮತ್ತು ಗುಪ್ತ ಕಡತಗಳನ್ನು ವಿಕಿಲೀಕ್ಸ್‌ನಲ್ಲಿ ಬಹಿರಂಗಪಡಿಸುವ ಮೂಲಕ ಅಸಾಂಜ್ ಅಮೆರಿಕ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವುದನ್ನು ಸ್ಮರಿಸಬಹುದಾಗಿದೆ.
ಸ್ವೀಡನ್‌ನಲ್ಲಿ ತನ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಮೊಕದ್ದಮೆಯ ಹಿನ್ನೆಲೆಯಲ್ಲಿ ಬಂಧನದಿಂದ ಪಾರಾಗಲು ಅವರು 2012 ಜೂನ್‌ನಿಂದ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅಡಗಿಕೊಂಡಿದ್ದಾರೆ.
ಅದೇ ವೇಳೆ, ತನ್ನ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿದ ಬಳಿಕ ಸ್ವೀಡನ್ ತನ್ನನ್ನು ಅಮೆರಿಕಕ್ಕೆ ಹಸ್ತಾಂತರಿಸುತ್ತದೆ ಎಂದು ಹೇಳಿರುವ ಅವರು, ಇದು ತನ್ನನ್ನು ಅಮೆರಿಕಕ್ಕೆ ಒಪ್ಪಿಸಲು ಆಡುತ್ತಿರುವ ನಾಟಕವಾಗಿದೆ ಎಂದಿದ್ದಾರೆ.
 ರಹಸ್ಯ ಸೇನಾ ಮಾಹಿತಿಗಳನ್ನು ಸೋರಿಕೆ ಮಾಡಿರುವುದಕ್ಕೆ ಸಂಬಂಧಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಅಸಾಂಜ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ ದಾಖಲಾಗಿದೆ. ಒಮ್ಮೆ ಅವರು ಅಮೆರಿಕದ ವಶವಾದರೆ ಜೀವನಪರ್ಯಂತ ಜೈಲಿನಲ್ಲಿ ಕೊಳೆಯುವುದು ನಿಶ್ಚಿತ ಎಂದು ಹೇಳಲಾಗಿದೆ.
ಅದೇ ವೇಳೆ, ಅಸಾಂಜ್‌ರ ಸ್ವಾತಂತ್ರವನ್ನು ಕಸಿದುಕೊಳ್ಳಲಾಗಿದೆ ಎಂಬ ಆರೋಪವನ್ನು ಬ್ರಿಟನ್ ಮತ್ತು ಸ್ವೀಡನ್‌ಗಳೆರಡೂ ನಿರಾಕರಿಸಿವೆ. ಅಸಾಂಜ್ ಸ್ವಯಂ ಇಚ್ಛೆಯಿಂದ ರಾಯಭಾರ ಕಚೇರಿ ಪ್ರವೇಶಿಸಿದ್ದಾರೆ ಎಂದು ಅವು ಹೇಳಿವೆ.
ತಾನೋರ್ವ ರಾಜಕೀಯ ನಿರಾಶ್ರಿತನಾಗಿದ್ದು, ಇಕ್ವೆಡಾರ್‌ನಲ್ಲಿ ತನಗೆ ಆಶ್ರಯ ಪಡೆಯಲು ಸಾಧ್ಯವಾಗದಂಥ ಪರಿಸ್ಥಿತಿಯನ್ನು ಸೃಷ್ಟಿಸುವ ಮೂಲಕ ತನ್ನ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂಬುದಾಗಿ ಆಸ್ಟ್ರೇಲಿಯ ಪ್ರಜೆ ಅಸಾಂಜ್ ವಿಶ್ವಸಂಸ್ಥೆಯ ನಿರಂಕುಶ ಬಂಧನ ಕುರಿತ ಕ್ರಿಯಾ ಸಮಿತಿಗೆ ದೂರು ನೀಡಿದ್ದರು.
ಈ ಸಮಿತಿಯ ತೀರ್ಪನ್ನು ಜಾರಿಗೊಳಿಸುವುದು ಯಾವುದೇ ದೇಶಕ್ಕೂ ಕಡ್ಡಾಯವಲ್ಲ.
ನಿರಂಕುಶ ಬಂಧನ ಕುರಿತ ಕ್ರಿಯಾ ಸಮಿತಿಯು ಒಮ್ಮತದ ತೀರ್ಪನ್ನು ನೀಡಿಲ್ಲವಾದರೂ, ತೀರ್ಪು ಅಸಾಂಜ್ ಪರವಾಗಿ ಬಂದಿದೆ. ಸಮಿತಿಯಲ್ಲಿರುವ ಐವರು ಸದಸ್ಯರ ಪೈಕಿ ಮೂವರು ಅಸಾಂಜ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರೆ, ಒಬ್ಬರು ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಇನ್ನೊಬ್ಬರು ತಟಸ್ಥ ಧೋರಣೆ ತಳೆದರು.


ತೀರ್ಪನ್ನು ಪ್ರಶ್ನಿಸುವೆ; ಹೊರ ಬಂದರೆ ಬಂಧಿಸುವೆ: ಬ್ರಿಟನ್


ಲಂಡನ್, ಫೆ. 5: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್, ನಿರಂಕುಶ ಬಂಧನದ ಸಂತ್ರಸ್ತ ಎಂಬುದಾಗಿ ವಿಶ್ವಸಂಸ್ಥೆಯ ಸಮಿತಿಯೊಂದು ನೀಡಿರುವ ತೀರ್ಪನ್ನು ತಾನು ಪ್ರಶ್ನಿಸುವುದಾಗಿ ಬ್ರಿಟನ್ ಶುಕ್ರವಾರ ಹೇಳಿದೆ. ಅದೇ ವೇಳೆ, ಅವರು ಇಕ್ವೆಡಾರ್ ರಾಯಭಾರ ಕಚೇರಿಯಿಂದ ಹೊರಬಂದರೆ ಬಂಧಿಸುವುದಾಗಿ ಅದು ಸ್ಪಷ್ಟಪಡಿಸಿದೆ.
ಅಸಾಂಜ್‌ರ ಸ್ವಾತಂತ್ರವನ್ನು ಕಸಿದುಕೊಳ್ಳಲಾಗಿದೆ ಎಂಬುದಾಗಿ ವಿಶ್ವಸಂಸ್ಥೆಯ ನಿರಂಕುಶ ಬಂಧನ ಕುರಿತ ಕ್ರಿಯಾ ಸಮಿತಿಯ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಿಸಿದ ಅಧಿಕೃತ ವಕ್ತಾರರೊಬ್ಬರು, ಅವರನ್ನು ಬ್ರಿಟನ್‌ನಲ್ಲಿ ಯಾವತ್ತೂ ನಿರಂಕುಶ ಬಂಧನಕ್ಕೆ ಒಳಪಡಿಸಲಾಗಿಲ್ಲ ಎಂದು ಪ್ರತಿಪಾದಿಸಿದರು.
‘‘ವಿಶ್ವಸಂಸ್ಥೆಯ ಸಮಿತಿಯ ತೀರ್ಪಿನಿಂದ ಏನೂ ಬದಲಾಗುವುದಿಲ್ಲ. ಜೂಲಿಯನ್ ಅಸಾಂಜ್ ನಿರಂಕುಶ ಬಂಧನದ ಸಂತ್ರಸ್ತ ಎಂಬ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಸಮಿತಿಯ ತೀರ್ಪನ್ನು ಔಪಚಾರಿಕವಾಗಿ ಪ್ರಶ್ನಿಸುತ್ತೇವೆ ಎಂದು ನಾವು ವಿಶ್ವಸಂಸ್ಥೆಗೆ ಈಗಾಗಲೇ ತಿಳಿಸಿದ್ದೇವೆ. ಸಮಿತಿಯ ತೀರ್ಪು ವಾಸ್ತವಾಂಶಗಳು ಮತ್ತು ಬ್ರಿಟಿಶ್ ಕಾನೂನು ವ್ಯವಸ್ಥೆ ನೀಡಿರುವ ರಕ್ಷಣೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ವಾಸ್ತವವಾಗಿ ಅವರು ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿದ್ದುಕೊಂಡು ಕಾನೂನುಬದ್ಧ ಬಂಧನವನ್ನು ಸ್ವಯಂಪ್ರೇರಿತವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ’’ ಎಂದು ವಕ್ತಾರರು ಹೇಳಿದರು.


ತೀರ್ಪನ್ನು ಗೌರವಿಸಿ: ಬ್ರಿಟನ್, ಸ್ವೀಡನ್‌ಗೆ ಅಸಾಂಜ್ ಕರೆ


ಲಂಡನ್, ಫೆ. 5: ಇಕ್ವೆಡಾರ್ ರಾಯಭಾರ ಕಚೇರಿಯಿಂದ ಸ್ವತಂತ್ರವಾಗಿ ಹೊರಹೋಗಲು ತನಗೆ ಅವಕಾಶ ನೀಡಬೇಕು ಎಂಬ ವಿಶ್ವಸಂಸ್ಥೆಯ ಸಮಿತಿಯೊಂದರ ತೀರ್ಪನ್ನು ಗೌರವಿಸುವಂತೆ ಜೂಲಿಯನ್ ಅಸಾಂಜ್ ಇಂದು ಬ್ರಿಟನ್ ಮತ್ತು ಸ್ವೀಡನ್‌ಗೆ ಕರೆ ನೀಡಿದ್ದಾರೆ.
‘‘ಈಗ ತೀರ್ಪನ್ನು ಅನುಷ್ಠಾನಕ್ಕೆ ತರುವುದು ಸ್ವೀಡನ್ ಮತ್ತು ಬ್ರಿಟನ್ ಸರಕಾರಗಳ ಕೆಲಸವಾಗಿದೆ’’ ಎಂದು ಅಸಾಂಜ್ ಇಲ್ಲಿನ ಇಕ್ವೆಡಾರ್ ರಾಯಭಾರ ಕಚೇರಿಯ ಒಳಗಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News