×
Ad

ಮಂಗಳೂರು : ಹಲ್ಲೆ ಪ್ರಕರಣ, ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯ

Update: 2016-02-05 19:11 IST

ಮಂಗಳೂರು,ಫೆ.5: ಪುತ್ತೂರು ವಿಧಾನಸಭಾ ಕೇತ್ರದ ಶಾಂತಿಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಜಿರೋಡಿ ಪರಿಶಿಷ್ಟರ ಕಾಲನಿಯ ದಿವಾಕರ ಮೊಗೇರ(40) ಗುಡಿಸಲಿಗೆ ನುಗ್ಗಿ, ಮನೆಮಂದಿಯ ಮೇಲೆ ಮಾರಕಾಸ್ತ್ರಗಳಿಂದ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ, ದ.ಕ ಜಿಲ್ಲಾ ಶಾಖೆಯು ಖಂಡಿಸಿದ್ದು ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದೆ.

    ಆರೋಪಿಗಳನ್ನು ಸಕಾಲದಲ್ಲಿ ಬಂಧಿಸುವಲ್ಲಿ ಸಫಲರಾದ ಪುತ್ತೂರು ನಗರ ಪೊಲೀಸರನ್ನು ದಸಂಸ ಅಭಿನಂದಿಸಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬದಲಾದ ಸರ್ಕಾರಗಳಲ್ಲಿ ಚುನಾಯಿತರಾದ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯಗಳು ಜಾಸ್ತಿಯಾಗಿ ನಡೆಯುತ್ತಿದೆ. ಪರಿಶಿಷ್ಟರ ಅಭಿವೃದ್ದಿ ಕಾರ್ಯಗಳು ಕೂಡಾ ನಿಧಾನಗತಿಯಲ್ಲಿ ಸಾಗುತ್ತಿದೆ. ಜಿಲ್ಲೆಯ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ಹಿರಿಯ ಅಧಿಕಾರಿ ಹುದ್ದೆಯಲ್ಲಿ ಜಾತಿವಾದಿಗಳೇ ತುಂಬಿಕೊಂಡಿದ್ದಾರೆ. ಸಿಬ್ಬಂದಿ ಕೊರತೆಯನ್ನು ನೆಪ ಮಾಡಿಕೊಂಡು , ದಲಿತ ನೌಕರರಿಗೆ ಕೆಲಸದ ಒತ್ತಡ ಹೇರುವುದು, ಕರ್ತವ್ಯ ಹಂಚಿಕೆಯಲ್ಲಿ ತಾರತಮ್ಯ ನಡೆಸುವುದು, ವಿನಾ ಕಾರಣ ಅಮಾನತುಗೊಳಿಸುವುದು ಮುಂತಾದ ಮಾನಸಿಕ ದೌರ್ಜನ್ಯಗಳು ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿದೆ. ಮಡಿಕೇರಿಯ ಪ್ರಾಂಶುಪಾಲರದ ಸುದೇಶ್‌ರವರು ಆತ್ಮಹತ್ಯೆ ಮಾಡಿ ಸಾವಿಗೆ ಶರಣಾಗಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಆಡಳಿತ ಮಂಡಳಿಯ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ದಲಿತ ನೌಕರರಿಗೆ ಆಡಳಿತ ವರ್ಗದಿಂದ ಅನ್ಯಾಯವಾದರೆ , ನ್ಯಾಯ ಸಮ್ಮತವಾಗಿ ಹೋರಾಟ ನಡೆಸಬೇಕು, ಆತ್ಮಹತ್ಯೆ ಸಮಸ್ಯೆಗೆ ಪರಿಹಾರ ಅಲ್ಲ. ದಲಿತ ನೌಕರರ ಹಿತರಕ್ಷಣೆ ಮತ್ತು ಸ್ವಾಭಿಮಾನದ ಸೇವೆಗೆ ಧಕ್ಕೆ ಉಂಟುಮಾಡಿದರೆ , ದಲಿತ ಸಂಘಟನೆಗಳು ಐಕ್ಯತಾ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ದಸಂಸದ ಜಿಲ್ಲಾ ಸಂಘಟನಾ ಸಂಚಾಲಕ ಪಿ.ಕೇಶವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News