ಹಳಿ ತಪ್ಪಿದ ಕನ್ಯಾಕುಮಾರಿ-ಬೆಂಗಳೂರು ರೈಲು ತಮಿಳುನಾಡಿನಲ್ಲಿ ನಡೆದ ಅವಘಡ,14 ಜನರಿಗೆ ಗಾಯ

Update: 2016-02-05 13:50 GMT

ವೆಲ್ಲೂರು,ಫೆ.5: ವೆಲ್ಲೂರು ಜಿಲ್ಲೆಯ ನತ್ರಂಪಳ್ಳಿ ಸಮೀಪ ಶುಕ್ರವಾರ ನಸುಕಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕನ್ಯಾಕುಮಾರಿ-ಬೆಂಗಳೂರು ಐಲ್ಯಾಂಡ್ ಎಕ್ಸ್‌ಪ್ರೆಸ್ ರೈಲಿನ ಸುಮಾರು ಒಂಭತ್ತು ಬೋಗಿಗಳು ಹಳಿ ತಪ್ಪಿದ್ದು, 14 ಪ್ರಯಾಣಿಕರು ಗಾಯಗೊಂಡಿದ್ದಾರೆ.
ನಸುಕಿನ 4:08ಗಂಟೆಗೆ ರೈಲು ನತ್ರಂಪಳ್ಳಿಯ ವೇತಪಟ್ಟು ಸೇತುವೆಯ ಮೇಲೆ ಚಲಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಬೆಂಗಳೂರು ರೈಲ್ವೆ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.
ರೈಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿರುವ 14 ಜನರು ನತ್ರಂಪಳ್ಳಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಗಾಯಾಳುಗಳು ಎಸ್6,ಎಸ್7 ಮತ್ತು ಎಸ್8 ಬೋಗಿಗಳಲ್ಲಿ ಪ್ರಯಾಣಿಸುತ್ತಿದು,್ದ ಅಪಘಾತದಲ್ಲಿ ಈ ಬೋಗಿಗಳು ಮಗುಚಿ ಬಿದ್ದಿದ್ದವು.
ಇತರ ಪ್ರಯಾಣಿಕರನ್ನು ಏಳು ಬಸ್‌ಗಳು ಮತ್ತು ಜೋಲಾರ್‌ಪೇಟೆಯಿಂದ ವಿಶೇರೈಲಿನ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.
ಸ್ಥಳದಲ್ಲಿದ್ದ ವೆಲ್ಲೂರು ಜಿಲ್ಲಾಧಿಕಾರಿ ಆರ್.ನಂದಗೋಪಾಲ್ ಅವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆಯೆಂದು ತಿಳಿಸಿದರು. ಪ್ರಯಾಣಿಕರಿಗಾಗಿ ಚಹಾ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.ಕೆಲವು ಪ್ರಯಾಣಿಕರನ್ನು ಐದು ಬಸ್‌ಗಳಲ್ಲಿ ಜೋಲಾರ್‌ಪೇಟೆಗೆ ರವಾನಿಸಿ ಅಲ್ಲಿಂದ ಜೋಲಾರ್‌ಪೇಟೆ-ಬೆಂಗಳೂರು ರೈಲಿನಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಯಿತು.
ಅಪಘಾತದಿಂದಾಗಿ ಚೆನ್ನೈ-ಬೆಂಗಳೂರು ವಿಭಾಗದಲ್ಲಿ ರೈಲುಗಳ ಸಂಚಾರ ವ್ಯತ್ಯಯಗೊಂಡಿತ್ತು.ಹಲವಾರು ರೈಲುಗಳ ಸಂಚಾರವನ್ನು ಶುಕ್ರವಾರ ರದ್ದುಗೊಳಿಸಲಾಗಿತ್ತು.
ರೈಲುಹಳಿ ತುಂಡಾಗಿದ್ದು ಅಪಘಾತಕ್ಕೆ ಕಾರಣವೆನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
                   ....................................
 ಬೆಂಗಳೂರು ಸಿಟಿ,ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೃಷ್ಣರಾಜಪುರಂ ರೈಲ್ವೆ ನಿಲ್ದಾಣಗಳಲ್ಲಿ ಸಹಾಯವಾಣಿಗಳನ್ನು ಆರಂಭಿಸಲಾಗಿದೆ
080-22156553,080-22156554, 080-22873103,080-23339162, 080-25650308

........................................................................................

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News