×
Ad

ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್‌ಗೆ ಚಿಕಿತ್ಸೆ ಸುಲಭ: ನ್ಯಾ. ಉಮಾ

Update: 2016-02-06 12:27 IST

ಮಂಗಳೂರು, ಫೆ. 6: ಮಹಿಳೆಯರನ್ನು ಕ್ರೂರವಾಗಿ ಕಾಡುವ ಸ್ತನ್ಯ ಕ್ಯಾನ್ಸರ್ ಕುರಿತಂತೆ ಮಾಹಿತಿಯ ಕೊರತೆ ಹಾಗೂ ಮುಜಗರದಿಂದಾಗಿ ತಡೆಗಟ್ಟಲು ಅಸಾಧ್ಯವಾಗುತ್ತಿದ್ದು, ಪ್ರಾಥಮಿಕ ಹಂತದಲ್ಲೇ ರೋಗದ ಗುಣಲಕ್ಷಣಗಳನ್ನು ಗುರುತಿಸುವ ಮೂಲಕ ಚಿಕಿತ್ಸೆ ಸುಲಭ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಮಾ ಎಂ.ಜಿ. ಹೇಳಿದ್ದಾರೆ.


ಅವರು ಇಂದು ನಗರದ ಪಾಂಡೇಶ್ವರ ಬಳಿಯ ಸೈಂಟ್ ಆ್ಯನ್ಸ್ ಕಾಲೇಜ್ ಆಫ್ ಎಜುಕೇಶನ್ ಸಂಸ್ತೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಮಂಗಳೂರು ನಗಗ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮತ್ತು ಆಸ್ತಿ ಹಕ್ಕಿನ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಭಾಗಹಿಸಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲಸದ ಒತ್ತಡದಿಂದಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ ವಹಿಸದೆ, ದೇಹದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಮುಂಜಾಗೃತೆ ವಹಿಸಿ ಭಯ ಪಡದೆ ಸೂಕ್ಚ ಚಿಕಿತ್ಸೆಗೆ ಒಳಗಾಗುವ ಮೂಲಕ ಈ ರೋಗವನ್ನು ತಡೆಯಬಹುದು ಎಂದು ಹೇಳಿದರು.

ಹಣದ ವ್ಯಾಮೋಹದಿಂದ ಮಾನವೀಯ ಸಂಬಂಧಗಳು ನಾಶ
ಆಸ್ತಿ ಹಕ್ಕಿನ ಕುರಿತಂತೆ ಮಾತನಾಡಿದ ನ್ಯಾ. ಉಮಾ ಎಂ.ಜಿ., ತಂದೆ ಹಾಗೂ ಗಂಡನ ಆಸ್ತಿಯಲ್ಲಿ ಮಹಿಳೆಯರ ಹಕ್ಕಿನ ಬಗ್ಗೆ ಇನ್ನೂ ಜಾಗೃತಿ ಹೆಚ್ಚಾಗಿ ಇಲ್ಲವಾಗಿದೆ. ಇಂದು ಹಣದ ವ್ಯಾಮೋಹದಿಂದಾಗಿ ಮಾನವೀಯ ಸಂಬಂಧಗಳು ಹದಗೆಡುತ್ತಿವೆ. ದ.ಕ. ಜಿಲ್ಲೆಯಲ್ಲಿ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ 1641 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಈ ಬಗ್ಗೆ ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲು ವಕೀಲರು ಸಹಕರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್, ಮಹಿಳಾ ಸಿಬ್ಬಂದಿಗಳು ಸೇರಿದಂತೆ ತರಬೇತಿಯ ಸಂದರ್ಭ ದೈಹಿಕ ಆರೋಗ್ಯ ಕ್ಷಮತೆಯನ್ನು ಹೊಂದಿರುವುದರಿಂದ ಬಳಿಕ ಕೆಲಸದ ಒತ್ತಡದಿಂದಾಗಿ ಪೊಲೀಸ್ ಸಿಬ್ಬಂದಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ.

ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಈ ಬಗ್ಗೆ ಗಮನ ಹರಿಸಬೇಕು. ಸಮರ್ಪಕ ಆರೋಗ್ಯ ತಪಾಸಣೆ ಬಗ್ಗೆ ಗಮನ ಹರಿಸುವ ಮೂಲಕ ಮಾರಕ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು.
ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ., ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ, ಮಹಿಳಾ ಮತುತಿ ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಕ್ಲಾರ ಎ.ಸಿ., ಬಂಟ್ವಾಳ ಎಎಸ್‌ಪಿ ಲಕ್ಷ್ಮಣ್ ನಿಂಬರ್ಗಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಪನ್ಮೂಲ ವ್ಯಕ್ತಿಗಳಾಗಿ ಸ್ತನ ಕ್ಯಾನ್ಸರ್ ತಜ್ಞ ಡಾ. ವೆಂಕಟೇಶ್ ಸಂಜೀವ ಹಾಗೂ ಮಂಗಳೂರು ವಕೀಲರ ಸಂಘದ ಹಿರಿಯ ನ್ಯಾಯವಾದಿ ಎ. ಉದಯಾನಂದ ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ಬಿ. ಸ್ವಾಗತಿಸಿದರು. ಪೊಲೀಸ್ ಉಪ ಆಯುಕ್ತ ಡಾ.ಎಂ.ಸಂಜೀವ ಪಾಟೀಲ್ ವಂದಿಸಿದರು. ಅನಿತಾ ಕಿಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News