ಸುಳ್ಯ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಬಂಡಾಯದ ಬಿರುಗಾಳಿ
- ಬೆಳ್ಳಾರೆ ಕ್ಷೇತ್ರದಲ್ಲಿ ಮುಗಿಯದ ಗೊಂದಲ, ಬಿಜೆಪಿಯಿಂದ ಇಬ್ಬರ ನಾಮಪತ್ರ
- ಮನ್ಮಥ, ಕರುಣಾಕರ ಬರೆಮೇಲು ನಾಮಪತ್ರ ಸಲ್ಲಿಕೆ
ಸುಳ್ಯ: ಬೆಳ್ಳಾರೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕರುಣಾಕರ ಬರೆಮೇಲು ನಾಮಪತ್ರ ಸಲ್ಲಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ಕರುಣಾಕರ ಬರೆಮೇಲು ಬೆಳ್ಳಾರೆ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಆದರೆ ಪಕ್ಷ ಅಲ್ಲಿಗೆ ಎಸ್.ಎನ್.ಮನ್ಮಥರ ಹೆಸರನ್ನು ಅಂತಿಮಗೊಳಿಸಿತ್ತು. ಇದರಿಂದ ಅಸಮಾಧಾನಗೊಂಡ ಕರುಣಾಕರ ಬರೆಮೇಲು ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ಪಕ್ಷದ ಅಧಿಕೃತ ಅಭ್ಯರ್ಥಿ ಎಸ್.ಎನ್.ಮನ್ಮಥ ಕೂಡಾ ನಾಮಪತ್ರ ಸಲ್ಲಿಸಿದ್ದಾರೆ. ಈ ಮಧ್ಯೆ ಕರುಣಾಕರ ಬರೆಮೇಲು ಅವರೊಂದಿಗೆ ಪಕ್ಷ ಮುಖಂಡರು ಹಲವು ಸುತ್ತಿನ ಚರ್ಚೆ ನಡೆಸಿದ್ದು, ಮುಂದಿನ ಬೆಳವಣಿಗೆ ಕಾದು ನೋಡಬೇಕಾಗಿದೆ. ಪಕ್ಷದಿಂದ ಬಿ ಫಾರ್ಮ್ ದೊರೆಯುವ ಭರವಸೆ ಇದೆ ಎಂದು ಕರುಣಾಕರ ಬರೆಮೇಲು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್‌ನಲ್ಲೂ ಬಂಡಾಯ:
ಬೆಳ್ಳಾರೆ ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೂ ಬಂಡಾಯದ ಭೀತಿ ಎದುರಾಗಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ಆನಂದ ಬೆಳ್ಳಾರೆಯವರ ಪತ್ನಿ ಲಲಿತಾ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷ ನಳಿನಾಕ್ಷಿ ಅವರ ಹೆಸರನ್ನು ಅಂತಿಮಗೊಳಿಸಿ ಅವರು ನಾಮಪತ್ರ ಸಲ್ಲಿಸಿದ್ದರು. ಇದರಿಂದ ಅಸಮಾಧಾನಗೊಂಡ ಆನಂದ ಬೆಳ್ಳಾರೆಯವರು ಪತ್ನಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. 35 ವರ್ಷದಿಂದ ಕಾಂಗ್ರೆಸ್ ಕಾರ್ಯಕರ್ತ ಈ ಹಿಂದೆಯೂ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ನೀಡಿರಲಿಲ್ಲ. ಈ ಬಾರಿ ಪತ್ನಿ ಲಲಿತಾ ನಾಮಪತ್ರ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ನಾಮಪತ್ರ ಹಿಂದಕ್ಕೆ ಪಡೆಯುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.