ಅಂಡರ್-19 ವಿಶ್ವಕಪ್: ಭಾರತ ಸೆಮಿಫೈನಲ್‌ಗೆ

Update: 2016-02-06 18:03 GMT

ರಿಷಬ್ ಪಂತ್ ಆಕರ್ಷಕ ಶತಕ

 ಫತುಲ್ಲಾಹ್(ಬಾಂಗ್ಲಾದೇಶ), ಫೆ.6: ದಿಲ್ಲಿಯ ವಿಕೆಟ್‌ಕೀಪರ್-ದಾಂಡಿಗ ರಿಷಬ್ ಪಂತ್‌ಗೆ ಶನಿವಾರ ಶುಭದಿನವಾಗಿ ಪರಿಣಮಿಸಿತು. ಶನಿವಾರ ಇಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ರಿಷಭ್ ಶತಕವನ್ನು ಸಿಡಿಸುವುದರೊಂದಿಗೆ ಭಾರತವನ್ನು ಸೆಮಿಫೈನಲ್‌ಗೆ ತಲುಪಿಸಿದರು. ಮತ್ತೊಂದೆಡೆ, ಬೆಂಗಳೂರಿನಲ್ಲಿ ನಡೆದಿದ್ದ ಐಪಿಎಲ್ ಆಟಗಾರರ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 1.9 ಕೋಟಿ ರೂ.ಗೆ ಹರಾಜಾದರು.

 ಎಡಗೈ ದಾಂಡಿಗ ಪಂತ್ ಶತಕ(111 ರನ್, 96 ಎಸೆತ, 14 ಬೌಂಡರಿ, 2 ಸಿಕ್ಸರ್), ಸರ್ಫ್‌ರಾಝ್ ಖಾನ್(76), ಅರ್ಮಾನ್ ಜಾಫರ್(64) ಹಾಗೂ ಅನ್ಮೋಲ್ ಪ್ರೀತ್ ಸಿಂಗ್(41) ಅವರ ಪ್ರಮುಖ ಕಾಣಿಕೆಯ ನೆರವಿನಿಂದ ಭಾರತ ತಂಡ ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 349 ರನ್ ಗಳಿಸಿತು.

ಗೆಲ್ಲಲು ಕಠಿಣ ಸವಾಲು ಪಡೆದ ನಮೀಬಿಯಾ ತಂಡ ಅನ್ಮೋಲ್ ಪ್ರೀತ್ ಸಿಂಗ್(3-27), ಮಯಾಂಕ್ ದಾಗಾರ್(3-25) ಹಾಗೂ ವಾಷಿಂಗ್ಟನ್ ಸುಂದರ್(2-27) ದಾಳಿಗೆ ತತ್ತರಿಸಿ 39 ಓವರ್‌ನಲ್ಲಿ ಕೇವಲ 149 ರನ್‌ಗೆ ಆಲೌಟಾಯಿತು. ಭಾರತ 197 ರನ್‌ಗಳ ಅಂತರದಿಂದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿತು.

ನಮೀಬಿಯಾ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿತ್ತು. ಆದರೆ ದಿಢೀರ್ ಕುಸಿತ ಕಂಡ ತಂಡ 96 ರನ್‌ಗೆ 5 ವಿಕೆಟ್ ಕಳೆದುಕೊಂಡಿತು. ಆ ಬಳಿಕ ಚೇತರಿಸಿಕೊಳ್ಳಲು ವಿಫಲವಾಗಿ 149 ರನ್‌ಗೆ ಗಂಟುಮೂಟೆ ಕಟ್ಟಿತು.

  ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಪರ ಪಂತ್ ಹಾಗೂ ಸರ್ಫ್‌ರಾಝ್ ಮತ್ತೊಮ್ಮೆ ಶ್ರೇಷ್ಠ ಪ್ರದರ್ಶನದಿಂದ ಗಮನ ಸೆಳೆದರು. ಶ್ರೇಷ್ಠ ಫಾರ್ಮ್ ಮುಂದುವರಿಸಿದ ಸರ್ಫ್‌ರಾಝ್ ಟೂರ್ನಿಯಲ್ಲಿ ಭಾರತ ಆಡಿರುವ 4 ಪಂದ್ಯಗಳಲ್ಲಿ ಮೂರನೆ ಬಾರಿ 70ಕ್ಕೂ ಅಧಿಕ ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ: 50 ಓವರ್‌ಗಳಲ್ಲಿ 349/6

(ರಿಷಬ್ ಪಂತ್ 111, ಸರ್ಫ್‌ರಾಝ್ ಖಾನ್ 76, ಫ್ರಿಟ್ಝ್ ಕೊಟ್‌ಝೀ 3-78)

ನಮೀಬಿಯಾ: 39 ಓವರ್‌ಗಳಲ್ಲಿ 152 ರನ್‌ಗೆ ಆಲೌಟ್

( ನಿಕೊ ಡೇವಿನ್ 33, ಮಾಯಾಂಕ್ ದಾಗರ್ 3-25, ಅನ್ಮೋಲ್‌ಪ್ರೀತ್ ಸಿಂಗ್ 3-27)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News