×
Ad

ಮಂಗಳೂರು : ಬಂಟ ಸಮುದಾಯ ಕೃಷಿಕ್ಷೇತ್ರದಿಂದ ವಿಮುಖರಾಗಬಾರದು:ಡಾ.ವೀರೇಂದ್ರ ಹೆಗ್ಗಡೆ

Update: 2016-02-06 19:51 IST

ಮಂಗಳೂರು,ಫೆ.6:ಕೃಷಿಯು ಬಂಟ ಸಮುದಾಯದ ಮೂಲಸಂಸ್ಕೃತಿ. ಆದರೆ ಪ್ರಸಕ್ತ ಬಂಟ ಸಮುದಾಯ ಸೇರಿದಂತೆ ಎಲ್ಲಾ ವರ್ಗದವರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮೂಲಸಂಸ್ಕೃತಿಯನ್ನು ಮರೆಯದಂತೆ ಸಮುದಾಯಕ್ಕೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

     ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ನೇತೃತ್ವದಲ್ಲಿ ಆಯೋಜಿಸಲಾದ 2 ದಿನಗಳ ರಾಷ್ಟ್ರೀಯ ಬಂಟ ಮಹಾ ಸಮ್ಮೇಳನವನ್ನು ಇಂದು ನಗರದ ಪುರಭವನದಲ್ಲಿ ಕಯ್ಯ್‌ರ ಕಿಂಞಣ್ಣ ರೈ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

 ಕೃಷಿಯನ್ನು ಲಾಭಕ್ಕಾಗಿ ಮಾತ್ರವಲ್ಲದೆ ಮಣ್ಣಿನ ಮೇಲಿನ ಪ್ರೀತಿಯಿಂದ ಮಾಡುತ್ತಿರುವವರು ಈ ಸಮುದಾಯದಲ್ಲಿ ಇದ್ದಾರೆ. ಕೃಷಿಯಲ್ಲಿ ಅದ್ಬುತ ಪ್ರಯೋಗವನ್ನು ಮಾಡಿದವರು ಈ ಸಮುದಾಯದಲ್ಲಿದ್ದಾರೆ . ಮುಂದಿನ ಜನಾಂಗವು ಮಣ್ಣಿನ ಸಂಬಂಧವನ್ನು, ಪ್ರೀತಿಯನ್ನು ಇಟ್ಟುಕೊಂಡು ಕೃಷಿಗೆ ಪ್ರಾಧಾನ್ಯತೆ ನೀಡಿ ಅದನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.

 ಬಂಟ ಸಮುದಾಯದಲ್ಲಿ ವ್ಯಾಪಕವಾಗಿದ್ದ ವರದಕ್ಷಿಣೆ ಪಿಡುಗು ಕಡಿಮೆಯಾಗಿದೆ. ಸಮಾಜದಲ್ಲಿ ಪರಿವರ್ತನೆ ಮೂಡಿದೆ.ಪ್ರಸಕ್ತ ಶಿಕ್ಷಣವೆ ವರದಕ್ಷಿಣೆಯಾಗಿದೆ. ಸಮಾಜದ ಹೆಣ್ಣು ಮಕ್ಕಳು ಶಿಕ್ಷಣ ಪಡೆದಿರುವುದರಿಂದ ವರದಕ್ಷಿಣೆ ಪಿಡುಗು ಕಡಿಮೆಯಾಗಿದೆ ಎಂದು ಹೇಳಿದರು.

ನಾಯಕತ್ವ ರಕ್ತಗತ ಮಾಡಿಕೊಂಡ ಸಮಾಜ ಬಂಟ ಸಮುದಾಯವಾಗಿದ್ದು ಕೃಷಿ, ಧಾರ್ಮಿಕ, ಸಾಮಾಜಿಕ, ಆರ್ಥಿಕ , ರಾಜಕೀಯ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಎಲ್ಲ ಕಡೆಯಲ್ಲಿಯೂ ಶ್ರೇಷ್ಠ ಸಾಧನೆ ಮಾಡಬೇಕೆಂಬ ಛಲದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು-ಕನ್ನಡ ಸಾಹಿತಿ ಡಾ. ಡಿ.ಕೆ .ಚೌಟ ವಹಿಸಿದ್ದರು.

  ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್.ವಿನಯ್ ಹೆಗ್ಡೆ ಸದಾಶಯ ತ್ರೈಮಾಸಿಕವನ್ನು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಚೇರ್‌ಮೆನ್ ಎ.ಸದಾನಂದ ಶೆಟ್ಟಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ,ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಬಾರ್ಕೂರು ಬಂಟ ಮಹಾಸಂಸ್ಥಾನದ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಎಂ ಆರ್ ಜಿ ಗ್ರೂಪ್ ನ ಪ್ರಕಾಶ್ ಶೆಟ್ಟಿ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಸರ್ವೋತ್ತಮ ಶೆಟ್ಟಿ ಯು.ಎ.ಇ, ಚಲನಚಿತ್ರ ನಟ ಪ್ರಕಾಶ್ ರೈ, ಸುಂದರ್ ಶೆಟ್ಟಿ ಯು.ಎಸ್.ಎ , ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಅಮರ್‌ನಾಥ ಶೆಟ್ಟಿ, ಪಾದೆ ಅಜಿತ್ ರೈ, ಪ್ರಕಾಶ್ ಭಂಡಾರಿ, ರೋಹಿತ್ ಹೆಗ್ಡೆ, ಡಾ.ಭಾಸ್ಕರ್ ಶೆಟ್ಟಿ, ರತ್ನಾಕರ್ ರೈ, ಸಂತೋಷ್ ಶೆಟ್ಟಿ , ಬಾಲಕೃಷ್ಣ ಹೆಗ್ಡೆ, ಸದಾನಂದ ಶೆಟ್ಟಿ ಸಿ.ಎ, ಪ್ರಭಾಕರ್ ಶೆಟ್ಟಿ, ಜಯಕರ್ ಇಂದ್ರಾಳಿ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ , ನವೀನ್ ಚಂದ್ರ ಶೆಟ್ಟಿ, ಸಂತೋಷ್‌ಕುಮಾರ್ ಶೆಟ್ಟಿ, ರಘುಶೆಟ್ಟಿ , ಮೈನಾ ಸದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News