ಮುಂಬೈ : ಸಿಗರೇಟು ಜಾಹೀರಾತಿಗೆ ನೊ ನೋ ಎಂದ ಜಾನ್ ಅಬ್ರಹಾಂ
ಮುಂಬೈ, ಫೆ. 6: ಬಾಲಿವುಡ್ ನ ಸ್ಟ್ರಾಂಗ್ ಮ್ಯಾನ್ , ಯುವಜನತೆಯ ನೆಚ್ಚಿನ ನಟ ಜಾನ್ ಅಬ್ರಹಾಂ ಒಪ್ಪಿದರೆ ಅವರನ್ನು ಬ್ರ್ಯಾಂಡ್ ಅಂಬಾಸಡರ್ ಮಾಡಲು ಬೇಕಾದಷ್ಟು ಬ್ರ್ಯಾಂಡ್ ಗಳು ದೊಡ್ಡ ಮೊತ್ತ ಪಾವತಿಸಲು ರೆಡಿ ಇವೆ. ವಿಶೇಷವಾಗಿ ಯುವಜನರನ್ನು ಸೆಳೆಯಲು ಬಯಸುವ ಬ್ರ್ಯಾಂಡ್ ಗಳು ಜಾನ್ ರಂತಹ ಹಾಟ್ ನಟರನ್ನು ಪಡೆಯಲು ತುದಿಗಾಲಲ್ಲಿ ನಿಂತಿರುತ್ತವೆ. ಆದರೆ ಜಾನ್ ಮಾತ್ರ ತಾನು ಪ್ರತಿನಿಧಿಸುವ ಬ್ರ್ಯಾಂಡ್ ಬಗ್ಗೆ ಸಾಕಷ್ಟು ಜಾಗರೂಕತೆ ವಹಿಸುತ್ತಾರೆ. ಹಾಗಾಗಿ ಇತ್ತೀಚಿಗೆ ಒಂದು ಖ್ಯಾತ ಸಿಗರೇಟು ಕಂಪೆನಿಯೊಂದು ಅವರನ್ನು ಸಂಪರ್ಕಿಸಿದಾಗ ಜಾನ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಕಂಪೆನಿ ದೊಡ್ಡ ಮೊತ್ತವನ್ನು ನೀಡಲು ಸಿದ್ಧವಿದ್ದರೂ ಜಾನ್ ಮಾತ್ರ ನೋ ಎಂದು ಬಿಟ್ಟರು.
" ಜಾನ್ ಕೆಲವು ಬ್ರ್ಯಾಂಡ್ ಗಳನ್ನು ಪ್ರತಿನಿಧಿಸುತ್ತಾರೆ. ಆದರೆ ಅದಕ್ಕೆ ಒಪ್ಪುವ ಮೊದಲು ಆ ಉತ್ಪನ್ನದ ಬಗ್ಗೆ ಸಾಕಷ್ಟು ಅಧ್ಯಯನ ಮಾಡುತ್ತಾರೆ. ಸಿಗರೇಟು ಕಂಪೆನಿ ಜಾನ್ ತನ್ನ ಉತ್ಪನ್ನಕ್ಕೆ ಅತ್ಯುತ್ತಮ ಆಯ್ಕೆ ಎಂದು ಅವರನ್ನು ಸಂಪರ್ಕಿಸಿತ್ತು. ಆದರೆ ಧೂಮಪಾನವನ್ನು ಪ್ರೋತ್ಸಾಹಿಸಲು ಬಯಸದ ಜಾನ್ ಸ್ಪಷ್ಟವಾಗಿ ನಿರಾಕರಿಸಿದರು " ಎಂದು ಅವರ ಆಪ್ತರು ಹೇಳಿದ್ದಾರೆ.
ನಿಜ ಜೀವನದಲ್ಲೂ ಧೂಮಪಾನ, ಮದ್ಯಪಾನ ಹಾಗು ಡ್ರಗ್ಸ್ ಗಳಿಂದ ಮಾರುದೂರ. ಈ ಹಿಂದೆ ಒಳ ಉಡುಪುಗಳ ಹಲವು ಪ್ರತಿಷ್ಠಿತ ಕಂಪೆನಿಗಳು ಜಾನ್ ರನ್ನು ತಮ್ಮ ಬ್ರ್ಯಾಂಡ್ ಪ್ರತಿನಿಧಿಸಲು ಕೇಳಿದ್ದರೂ ಜಾನ್ ಅದಕ್ಕೆ ಒಪ್ಪಿರಲಿಲ್ಲ.