ಚುಟುಕು ಸುದ್ದಿಗಳು
ಇಂದು ರಜತ ಪುನರ್ಮಿಲನ
ಮಂಗಳೂರು, ಫೆ. 6: ಕಿಟೆಲ್ ಮೆಮೋರಿಯಲ್ ಶಾಲೆಯ 1990-91ನೆ ಸಾಲಿನ ಎಸೆಸೆಲ್ಸಿ ವಿದ್ಯಾರ್ಥಿಗಳ ರಜತ ಪುನರ್ಮಿಲನ ಕಾರ್ಯಕ್ರಮ ೆ.7ರಂದು ನಡೆಯಲಿದೆ ಎಂದು ಕಿಟೆಲ್ ಮೆಮೋರಿಯಲ್ ಶಾಲಾ ರಜತ ಪುನರ್ಮಿಲನ ಸಮಿತಿಯ ಗೌರವ ಸಲಹೆಗಾರ ಶ್ರೀಕೃಷ್ಣ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ 1990-91ನೆ ಸಾಲಿನ ಹತ್ತನೆ ತರಗತಿಯ 72 ವಿದ್ಯಾರ್ಥಿಗಳು ಹಾಗೂ ಅಂದಿನ ಶಿಕ್ಷಕರು ಭಾಗವಹಿಸುವರು. ಶಿಕ್ಷಕರಿಂದ ಪಾಠ, ಹಾಜರಿ ಕರೆಯುವುದು ಹಾಗೂ ಆ ದಿನಗಳ ಮೆಲುಕು ಹಾಕುವುದು ನಡೆಯಲಿದೆ. ಶಾಲೆಗೆ ನೆನಪಿನ ಕಾಣಿಕೆ, ಶಿಕ್ಷಕರಿಗೆ ಸನ್ಮಾನ, ರಕ್ತದಾನ ಶಿಬಿರ, ನೇತ್ರದಾನ ಘೋಷಣಾ ಪತ್ರಕ್ಕೆ ಸಹಿ ಕಾರ್ಯಕ್ರಮಗಳು ಜರಗಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿಗಳಾದ ತಾರನಾಥ್, ಜಯಪ್ರಕಾಶ್, ಯೋಗಿನಿ ಉಪಸ್ಥಿತರಿದ್ದರು.
ಇಂದು ‘ಇಸ್ಲಾಮಿಕ್ ಮೊಡ್ಯುಲ್ ಎಕ್ಸ್‌ಪೊ’ ಸ್ಪರ್ಧೆ
ಮಂಗಳೂರು, ಫೆ.6: ಹಿದಾಯ ಫೌಂಡೇಶನ್‌ನ ಅಂಗಸಂಸ್ಥೆಯಾದ ಹಿದಾಯ ಮೆಸ್ಕೊ ಅರಬಿಕ್ ಅಕಾಡಮಿಯು ಪ್ರೌಢಶಾಲಾ ವಿದ್ಯಾರ್ಥಿ ಮತ್ತು ಶಿಕ್ಷಕಿಯರಿಗೆ ಇಸ್ಲಾಮಿಕ್ ಮೊಡ್ಯುಲ್ ಎಕ್ಸ್‌ಪೊ 2016 ಹೆಸರಿನ ಜಿಲ್ಲಾ ಮಟ್ಟದ ಪ್ರಾತ್ಯಕ್ಷಿಕಾ ಸ್ಪರ್ಧೆಯನ್ನು ನಗರದ ಹೈಲ್ಯಾಂಡ್ ಬಳಿಯ ಮಸ್ಜಿದುಲ್ ಇಹ್ಸಾನ್ ಕ್ಯಾಂಪಸ್‌ನಲ್ಲಿ ಫೆ.7ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4.30ರ ತನಕ ಏರ್ಪಡಿಸಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಅರಬಿಕ್ ಭಾಷೆ ಮತ್ತು ಇಸ್ಲಾಮಿನ ಪ್ರಮುಖ ಆಚಾರ-ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯಲಿರುವ ಈ ಸ್ಪರ್ಧೆಯಲ್ಲಿ 50ಕ್ಕಿಂತಲೂ ಹೆಚ್ಚು ಪ್ರಾತ್ಯಕ್ಷಿಕೆಗಳು ಪ್ರದರ್ಶನಗೊಳ್ಳಲಿವೆ. ಸಾರ್ವಜನಿಕರಿಗೆ ಈ ಪ್ರಾತ್ಯಕ್ಷಿಕೆಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹಿದಾಯ ಪೌಂಡೇಶನ್‌ನ ಅಧ್ಯಕ್ಷ ಇಮ್ತಿಯಾಝ್ ಜಿ. ಎ. ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಕಾಂಗ್ರೆಸ್‌ಗೆ ನೇಮಕ
ಬಂಟ್ವಾಳ, ಫೆ. 6: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ ಇಸ್ಮಾಯೀಲ್‌ರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿಯ ಶಿಾರಸಿನ ಮೇರೆಗೆ ನೇಮಿಸಿರುವುದಾಗಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಲ್ಬರ್ಟ್ ಮಿನೇಜಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ..
ಜಾರಿಗೆಬೈಲ್: ಅನುಸ್ಮರಣಾ ಕಾರ್ಯಕ್ರಮ
ಬೆಳ್ತಂಗಡಿ, ಫೆ.6: ಜಾರಿಗೆಬೈಲು ಮಸೀದಿ ವಠಾರದಲ್ಲಿ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣಾ ಸಂಗಮ ಹಾಗೂ ಸಅದಿಯಾ ಪ್ರಚಾರ ಸಮ್ಮೇಳನ ಇತ್ತೀಚೆಗೆ ಸ್ವಾಗತ ಸಮಿತಿ ಅಧ್ಯಕ್ಷ ಇಸ್ಮಾಯೀಲ್ ಹಾಜಿಯ ಅಧ್ಯಕ್ಷತೆಯಲ್ಲಿ ಜರಗಿತು.
ಅಬ್ದುರ್ರಹ್ಮಾನ್ ಬಾಖವಿ ಕಕ್ಕಿಂಜೆ ಉದ್ಘಾಟಿಸಿದರು. ಸೈಯದ್ ಶಿಹಾಬುದ್ದೀನ್ ಹೈದ್ರೋಸಿ ತಂಙಳ್ ಸಖಾಫಿ ಕಿಲ್ಲೂರು ದುಆ ಮಾಡಿದರು. ಸೈಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್‌ಶರ್ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಅಬ್ದುರ್ರಹ್ಮಾನ್ ಸಖಾಫಿ ನಾವೂರು, ಮುಹಮ್ಮದ್ ಖಲಂದರ್ ಪದ್ಮುಂಜ, ಹಬೀಬ್ ನಾಳ, ಹಾರಿಸ್ ಕುಕ್ಕುಡಿ, ಜಮಾಲುದ್ದೀನ್ ಲತೀಫಿ, ಎಂ. ಕೆ. ಬದ್ರುದ್ದೀನ್ ಪರಪ್ಪು, ಎಸ್.ಎ. ಮುಹಮ್ಮದ್ ರಝೀಯುದ್ದೀನ್, ಅಬ್ಬೋನು ಮದ್ದಡ್ಕ, ಅಬೂಬಕ್ಕರ್ ಹಿಮಮಿ, ಹೈದರ್ ಯಂತ್ರಡ್ಕ, ಯಾಕೂಬ್ ಸುಣಲಡ್ಡ, ಎನ್.ಎಂ. ಶರೀಫ್ ಸಖಾಫಿ, ಹನೀಫ್ ಸಖಾಫಿ ಬಂಗೇರಕಟ್ಟೆ, ಎಂ.ಎ. ಕಾಸಿಂ ಮುಸ್ಲಿಯಾರ್ ಮಾಚಾರ್, ಅಬ್ದುಲ್ ಕರೀಂ ಗೇರುಕಟ್ಟೆ, ಹಾಜಿ ಅಬ್ದುರ್ರಹ್ಮಾನ್ ಕನರಾಜೆ, ಮುಹಮ್ಮದ್ ಗೋವಿಂದೂರು, ನಾಸಿರ್ ಸುನ್ನತ್‌ಕೆರೆ, ಇರ್ಫಾನ್ ಸುಣಲಡ್ಡ, ನಝೀರ್ ಕಾಂತಿಜಾಲು, ಅಬ್ದುಲ್ ಕರೀಂ ಸಖಾಫಿ, ರಫೀಕ್ ಎನ್ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಅಬ್ಬೋನು ಶಾಫಿ ಪಲ್ಲಾದೆ ಧ್ವಜಾರೋಹಣಗೈದರು. ಅಫ್‌ತಾಬೆ ಮದೀನಾ ಅಹ್‌ಬಾಬ್ ತಂಡದಿಂದ ಬುರ್ದಾ ಮಜ್ಲಿಸ್ ನಡೆಯಿತು. ನವಾಝ್ ಮಾವಿನಕಟ್ಟೆ ನಿರೂಪಿಸಿದರು. ಹಾಫಿಲ್ ಅಬ್ದುಲ್ ಲತೀಫ್ ಸ್ವಾಗತಿಸಿ ರಫೀಕ್ ಮುಸ್ಲಿಯಾರ್ ವಂದಿಸಿದರು. ಈ ಸಂದರ್ಭ ಅಪಘಾತವೊಂದರಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಬೆಳ್ತಂಗಡಿ ಜಾರಿಗೆಬೈಲಿನ ನಿವಾಸಿ ಹೈದರ್‌ರ ಚಿಕಿತ್ಸೆಯ ವೆಚ್ಚಕ್ಕಾಗಿ ಎಸ್ಸೆಸ್ಸೆಫ್, ಎಸ್‌ವೈಎಸ್ ಜಾರಿಗೆಬೈಲು ಕಾರ್ಯಕರ್ತರು 75 ಸಾವಿರ ರೂ. ಗಳ ಚೆಕ್ಕನ್ನು ಹಸ್ತಾಂತರಿಸಿದರು.
ಎಸ್‌ಐಒ ಖಂಡನೆ
ಉಡುಪಿ, ಫೆ.6: ಬೆಂಗಳೂರಿನಲ್ಲಿ ತಾಂಝಾನಿಯಾ ಮೂಲದ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಘಟನೆ ಅಮಾನವೀಯ ಮಾತ್ರವಲ್ಲ ಅದು ಸಂವಿಧಾನಕ್ಕೆ ಎಸಗಿದ ದ್ರೋಹವಾಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ (ಎಸ್‌ಐಒ) ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸಿದೆ.
ಸರಕಾರವು ಈ ಹಿಂಸಾತ್ಮಕ ಕೃತ್ಯಗಳನ್ನು ಶೀಘ್ರವಾಗಿ ತಡೆಯಲು ಮುಂದಾಗಬೇಕು. ಒಬ್ಬ ಹೆಣ್ಣು ಮಗಳ ಜೊತೆ ಈ ರೀತಿ ಅಸಹ್ಯವಾಗಿ ವರ್ತಿಸಿರುವುದು ಶಿಕ್ಷಾರ್ಹ. ತಪ್ಪಿತಸ್ಥರ ವಿರುದ್ಧ ಶೀಘ್ರವಾಗಿ ಕ್ರಮಕೈಗೊಳ್ಳಬೇಕು ಎಂದು ಎಸ್‌ಐಓ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಶಿರ್ತಾಡಿ: ಆರೋಗ್ಯಾಧಿಕಾರಿಗೆ ಸನ್ಮಾನ
ಮೂಡುಬಿದಿರೆ, ಫೆ.6: ವರ್ಗಾವಣೆಗೊಂಡಿರುವ ಶಿರ್ತಾಡಿ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಪ್ರಕಾಶ್‌ರನ್ನು ಶಿರ್ತಾಡಿಯ ಸಂಘ ಸಂಸ್ಥೆಗಳು ಮತ್ತು ನಾಗರಿಕರ ಸಹಯೋಗದೊಂದಿಗೆ ಇತ್ತೀಚೆಗೆ ಸನ್ಮಾನಿಸಲಾಯಿತು.
ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಉಪನ್ಯಾಸಕ ಪುಂಡಿಕಾ ಗಣಪಯ್ಯ ಭಟ್ ಅಭಿನಂದನಾ ಭಾಷಣ ಮಾಡಿದರು. ತಾಪಂ ಸದಸ್ಯ ರುಕ್ಕಯ ಪೂಜಾರಿ, ವೈದ್ಯರಾದ ಡಾ.ಕೃಷ್ಣರಾಜ ಭಟ್, ಡಾ.ಆಶೀರ್ವಾದ್, ಡಾ.ಅನಿಲ್, ಆರ್.ಪ್ರಶಾಂತ್ ಡಿಸೋಜ, ಗ್ರಾಪಂ ಅಧ್ಯಕ್ಷೆ ಲತಾ ಹೆಗ್ಡೆ, ಮಾಜಿ ಅಧ್ಯಕ್ಷೆ ಫೆಡ್ರಿಕ್ ಪಿಂಟೊ ಶುಭ ಹಾರೈಸಿದರು. ಗಜಾನನ ಉಪಾಧ್ಯಾಯ ಸನ್ಮಾನ ಪತ್ರ ವಾಚಿಸಿದರು. ಜೈಸನ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ನವೀನ್ ಸಾಲ್ಯಾನ್ ವಂದಿಸಿದರು.
ಫೆ.10: ಸುಳ್ಯದಲ್ಲಿ ರೈತರ ಸಭೆ
ಸುಳ್ಯ, ಫೆ.6: ಕಾನ, ಬಾಣೆ, ಕುಮ್ಕಿ ಹಕ್ಕಿನ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದ ಅಧಿಕಾರವನ್ನು ರದ್ದು ಮಾಡಬೇಕು ಹಾಗೂ ಜಮೀನನ್ನು ರೈತರ ಕೈಯಿಂದ ವಶಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ಹೋರಾಟ ರೂಪಿಸುವ ಸಲುವಾಗಿ ರೈತರ ಸಭೆ ಫೆ.10ರಂದು ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ. ಎಂದು ಪುತ್ತೂರಿನ ಭಾರತೀಯ ಕಿಸಾನ್ ಸಂಘದ ಕುಮ್ಕಿ ಹಕ್ಕು ಹೋರಾಟ ಸಮಿತಿಯ ಮುಖಂಡ ಎಂ.ಜಿ.ಸತ್ಯನಾರಾಯಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆೆ.10ರಿಂದ 17ರವರೆಗೆ ಜಿಲ್ಲೆಯ ವಿವಿಧೆಡೆ ರೈತರ ಸಭೆಗಳನ್ನು ಆಯೋಜಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ರಬ್ಬರ್‌ಗೆ ಬೆಂಬಲ ಬೆಲೆ ಘೋಷಿಸಲು ಹಣವನ್ನು ಕಾಯ್ದಿಡುವಂತೆ ಸಮಿತಿ ಮುಖಂಡ ಅಡ್ಡಂತಡ್ಕ ದೇರಣ್ಣ ಗೌಡ ರಾಜ್ಯ ಸರಕಾರವನ್ನು ಆಗ್ರಹಿಸಿದರು. ಕುಮ್ಕಿ ಹೋರಾಟ ಸಮಿತಿಯ ರಾಮಚಂದ್ರ ನೆಕ್ಕಿಲ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸುಬ್ರಾಯ, ರೈತ ಮುಖಂಡ ವಸಂತ ಭಟ್ ತೋಡಿಕಾನ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನೆಯ ಅನುದಾನ ಕಡಿತಕ್ಕೆ ವಿರೋಧ
ಉಡುಪಿ, ಫೆ.6: ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಕೇಂದ್ರ ಸರಕಾರ ಶೇ.50ರಷ್ಟು ಅನುದಾನವನ್ನು ಕಡಿತಗೊಳಿಸಿರುವುದನ್ನು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿ ವಿರೋಧಿಸಿದೆ.
ಆರು ವರ್ಷದೊಳಗಿನ ಮಕ್ಕಳು ಮತ್ತು ತಾಯಂದಿರ ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಈ ಯೋಜನೆಗೆ 2015- 16ರ ಬಜೆಟ್‌ನಲ್ಲಿ 18,103 ಕೋಟಿ ರೂ.ನಿಂದ 8,245.77ಕೋಟಿ ರೂ. ಅನುದಾನ ಕಡಿತಗೊಳಿಸಲಾಗಿದೆ ಎಂದು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಸುಶೀಲಾ ನಾಡ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಯೋಜನೆಯಲ್ಲಿ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಯಾವುದೇ ರೀತಿಯ ಸವಲತ್ತು ಇಲ್ಲದೆ ದಿನಕ್ಕೆ ಎಂಟು ಗಂಟೆಗಳ ಕಾಲ ದುಡಿಯುತ್ತಿದ್ದಾರೆ. ಅಲ್ಲದೆ ಇವರನ್ನು ಇತರ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ ಎಂದ ಅವರು, ಈ ಎಲ್ಲ ವಿಚಾರಗಳ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಸಂಸತ್‌ನಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಈ ಯೋಜನೆಯನ್ನು ಸಾರ್ವತ್ರಿಕರಣಗೊಳಿಸಬೇಕು ಹಾಗೂ ಪ್ರತ್ಯೇತ ಇಲಾಖೆ ರಚಿಸಬೇಕು. ಎಲ್ಲ ಗುಣಮಟ್ಟದ ಮೂಲಭೂತ ಸೌಲಭ್ಯಗಳನ್ನು ಒದಗಿ
ಬೇಕು. ಯೋಜನೆಯನ್ನು ಯಾವುದೇ ಸ್ವರೂಪದಲ್ಲಿ ಖಾಸಗೀಕರಣಗೊಳಿಸಬಾರದು. 2016-17ರ ಬಜೆಟ್‌ನಲ್ಲಿ 36 ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಅಂಗನವಾಡಿ ನೌಕರರು ಮತ್ತು ಸಹಾಯಕಿಯರನ್ನು 3 ಮತ್ತು 4ನೆ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು. 15 ಸಾವಿರ ರೂ. ಕನಿಷ್ಟ ಕೂಲಿ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷೆ ಗೀತಾಶೆಟ್ಟಿ, ಕೋಶಾಧಿಕಾರಿ ಆಶಾಲತಾ, ಸುಜಾತ ಪೆರ್ಡೂರು, ಸಬಿತಾ ಶೆಟ್ಟಿ, ರತಿ ಶೆಟ್ಟಿ ಉಪಸ್ಥಿತರಿದ್ದರು.
ಫೆ.9: ಕೋಟ್ಪಾಕಾಯ್ದೆ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ
ಬೆಳ್ತಂಗಡಿ ಫೆ.6: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೋಟ್ಪಾಕಾಯ್ದೆಯನ್ನು ವಿರೋಧಿಸಿ ಫೆ.9ರಂದು ಮಂಗಳೂರಿನಲ್ಲಿ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಅಧ್ಯಕ್ಷ ಬಿ.ಎಂ. ಭಟ್ ತಿಳಿಸಿದ್ದಾರೆ. ಬೀಡಿ ಹಾಗೂ ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಮುಂದಾಗಿರುವ ಸರಕಾರ ಲಕ್ಷಾಂತರ ಸಂಖ್ಯೆಯಲ್ಲಿರುವ ಬೀಡಿ ಕಾರ್ಮಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪರ್ಯಾಯ ಬದುಕುವ ದಾರಿಯನ್ನು ಅವರಿಗೆ ತೋರುತ್ತಿಲ್ಲ. ಜಿಲ್ಲೆಯಲ್ಲಿ ಬೀಡಿ ಉದ್ಯಮ ಸ್ಥಗಿತಗೊಂಡರೆ ಇಲ್ಲಿನ ಆರ್ಥಿಕತೆಯೇ ಕುಸಿಯಲಿದೆ. ಲಕ್ಷಾಂತರ ಜನರು ಬದುಕನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರುಗಳಾದ ವಸಂತ ನಡ, ಈಶ್ವರಿ, ನಫೀಸಾ, ರೋಹಿಣಿ, ಜಯರಾಮ ಮಯ್ಯ ಉಪಸ್ಥಿತರಿದ್ದರು.
ಚೆಸ್ ಸ್ಪರ್ಧೆ: ಈಶಾ ಶರ್ಮ ಆಯ್ಕೆ
ಬೆಳ್ತಂಗಡಿ, ಫೆ.6: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 10ನೆ ತರಗತಿ ವಿದ್ಯಾರ್ಥಿನಿ ಈಶಾ ಶರ್ಮ ಈ ವರ್ಷ ಇರಾನ್ ದೇಶದಲ್ಲಿ ನಡೆಯುವ 12ನೆ ಏಶಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುತ್ತಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಮನಮೋಹನ್ ನಾಯಕ್ ತಿಳಿಸಿದರು. ಸಿಂಗಾಪುರದಲ್ಲಿ ನಡೆದ 11ನೆ ಏಶಿಯನ್ ಸ್ಕೂಲ್ ಆಫ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ, ನಾಗಪುರದಲ್ಲಿ ನಡೆದ 5ನೆ ರಾಷ್ಟ್ರೀಯ ಶಾಲಾ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ದ್ವಿತೀಯ ಸ್ಥಾನ, ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಬಾಲಕಿಯರ ಚೆಸ್ ಚಾಂಪಿಯನ್ ಶಿಪ್‌ನಲ್ಲಿ 5ನೆ ಸ್ಥಾನ, ಬೆಂಗಳೂರಿನಲ್ಲಿ ನಡೆದ ಬಿ.ಇ. ಆಫೀಸರ್ ಕ್ಲಬ್ 26 ನೆ ನ್ಯಾಶನಲ್ ಬಾಲಕಿಯರ ಚೆಸ್ ಚಾಂಪಿಯನ್ ಶಿಪ್‌ನಲ್ಲಿ 9ನೆ ಸ್ಥಾನ ಪಡೆದಿದ್ದಾರೆೆ. ಸುದ್ದಿಗೋಷ್ಠಿಯಲ್ಲಿ ಈಶಾ ಶರ್ಮ, ಶಾಲಾ ದೈಹಿಕ ಶಿಕ್ಷಣ ನಿರ್ದೇಶಕ ಸಂತೋಷ್ ಉಪಸ್ಥಿತರಿದ್ದರು.
ಶಟ್ಲ್ ಬ್ಯಾಡ್ಮಿಂಟನ್: ರಾಜ್ಯಮಟ್ಟಕ್ಕೆ ಆಯ್ಕೆ
ಬಂಟ್ವಾಳ, ಫೆ. 6: 2015-16ನೆ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾ ಕೂಟದ ಶಟ್ಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪೂರ್ಣಿಮಾ ಮಲಾಯಿ ಬೆಟ್ಟು ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫೆ.16: ಅಧ್ಯಯನ ಶಿಬಿರ
ಮಂಗಳೂರು, ಫೆ.6: ಝುಹ್‌ರೀಸ್ ಕೇಂದ್ರ ಸಮಿತಿ ವತಿಯಿಂದ ಫೆ.16ರಂದು ಬೆಳಗ್ಗೆ 9:30ಕ್ಕೆ ಸುನ್ನಿ ಸೆಂಟರ್ ದೇರಳಕಟ್ಟೆಯಲ್ಲಿ ಶೈಖುನಾ ಮಾಡವನ ಇಬ್ರಾಹೀಂ ಕುಟ್ಟಿ ಮುಸ್ಲಿಯಾರ್‌ರಿಂದ ‘ಇಸ್ಲಾಮೀ ಮನಶಾಸ್ತ್ರ’ ಎಂಬ ವಿಷಯದಲ್ಲಿ ಅಧ್ಯಯನ ಶಿಬಿರ ನಡೆಯಲಿದೆ. ಸಭೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ಬಾಸ್ ಉಸ್ತಾದ್ ಉದ್ಘಾಟಿಸಲಿದ್ದು, ಸಿಟಿಎಂ ಸಲೀಂ ತಂಙಳ್ ಅಸ್ಸಖಾಫ್ ಕೆ.ಸಿ.ರೋಡ್ ದುಆ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಸಾಹಿತಿ ಡಾ.ಸಾ.ಶಿ.ಮರುಳಯ್ಯರಿಗೆ ಶ್ರದ್ಧಾಂಜಲಿ
ಉಡುಪಿ, ಫೆ.6: ಬೆಂಗಳೂರಿನಲ್ಲಿ ನಿಧನರಾದ ಖ್ಯಾತ ಸಾಹಿತಿ, ಕಸಾಪದ ಮಾಜಿ ಅಧ್ಯಕ್ಷ ಡಾ.ಸಾ.ಶಿ.ಮರುಳಯ್ಯರಿಗೆ ಸಂತಾಪ ಸೂಚಕ ಸಭೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಶುಕ್ರವಾರ ನಡೆಯಿತು.
ಡಾ. ಸಾ.ಶಿ. ಮರುಳಯ್ಯರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕವಿ ಮನಸ್ಸಿನ ಮರುಳಯ್ಯ ಕುರಿತು ಡಾ. ಉಪ್ಪಂಗಳ ರಾಮಭಟ್, ಎಂಜಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಪುತ್ತಿ ವಸಂತ ಕುಮಾರ್ ಮಾತನಾಡಿದರು. ಪ್ರೊ.ಹೆರಂಜೆ ಕೃಷ್ಣ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕ ಮುರಳೀಧರ ಉಪಾಧ್ಯ, ಡಾ.ಎಸ್.ಎಸ್. ಅಂಗಡಿ, ತೋನ್ಸೆ ಕೃಷ್ಣ ಭಟ್, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕವಯತ್ರಿ ಜ್ಯೋತಿ ಮಹದೇವ್ ಉಪಸ್ಥಿತರಿದ್ದರು.