ಉ.ಪ್ರ.: ಪರಿಶಿಷ್ಟ ಸೆಲ್ ಅಧ್ಯಕ್ಷನನ್ನು ಸಭೆಯಿಂದ ಹೊರದಬ್ಬಿದ ಕಾಂಗ್ರೆಸ್ ನಾಯಕ
ಲಕ್ನೋ, ಫೆ.6: ತಾನು ಕೆಳಜಾತಿಯವನೆಂಬ ಕಾರಣದಿಂದ ಪಕ್ಷದ ಸಭೆಯಿಂದ ತನ್ನನ್ನು ಹೊರಗೆ ದಬ್ಬಲಾಗಿತ್ತೆಂದು ಉತ್ತರಪ್ರದೇಶದ ಕಾಂಗ್ರೆಸ್‌ನ ಪರಿಶಿಷ್ಟ ಜಾತಿಘಟಕದ ಅಧ್ಯಕ್ಷ ಜತೀಂದರ್ ಗೌರ್ ಆಪಾದಿಸಿದ್ದಾರೆ. ಘಟನೆಗೆ ಸಂಬಂಧಿಸಿ ಹಾಗೂ ತಪ್ಪಿತಸ್ಥರ ಬಗ್ಗೆ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಗೆ ಅವರು ಪತ್ರ ಬರೆದಿದ್ದಾರೆ. ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ವಿರುದ್ಧ ಕಾಂಗ್ರೆಸ್ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ, ಗೌರ್ ಮಾಡಿರುವ ಅರೋಪ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ.
ಮುಂಬರುವ ಮೇಯರ್ ಚುನಾವಣೆಗೆ ಸಂಬಂಧಿಸಿ, ಕಾರ್ಯತಂತ್ರವನ್ನು ರೂಪಿಸಲು ಗಾಝಿಯಾಬಾದ್‌ನ ಕಾಂಗ್ರೆಸ್ ಘಟಕ ಸಭೆ ಕರೆದಿತ್ತು. ಉತ್ತರಪ್ರದೇಶದ ಕಾಂಗ್ರೆಸ್ ಕಾರ್ಯದರ್ಶಿ ಲೋಕೇಶ್ ಚೌಧರಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಗಾಝಿಯಾಬಾದ್‌ನಲ್ಲಿ ಕಾಂಗ್ರೆಸ್‌ನ ಪರಿಶಿಷ್ಟ ವಿಭಾಗದ ಸೆಲ್‌ನ ಅಧ್ಯಕ್ಷ ಜತೀಂದರ್ ಗೌರ್ ಕೂಡಾ ಪಾಲ್ಗೊಂಡಿದ್ದರು. ಸಭೆಯಲ್ಲಿ ತಾನು ಆಸನವನ್ನು ಆಲಂಕರಿಸಿದ ಕ್ಷಣದಿಂದ, ಪಕ್ಷದ ಜಿಲ್ಲಾಧ್ಯಕ್ಷ ಓಂಪ್ರಕಾಶ್ ಶರ್ಮಾ ತನ್ನ ವಿರುದ್ಧ ದ್ವೇಷಪೂರಿತ ಟೀಕೆಗಳನ್ನು ಮಾಡತೊಡಗಿದ್ದರೆಂದು ಗೌರ್ ಪತ್ರದಲ್ಲಿ ಆಪಾದಿಸಿದ್ದಾರೆ. ಇದು ದೊಡ್ಡ ವ್ಯಕ್ತಿಗಳ ಸಭೆ. ನಿನ್ನಂತಹ ಸಣ್ಣಮನುಷ್ಯರಿಗೆ ಈ ಸಭೆಯಲ್ಲಿ ಯಾವುದೇ ಪಾತ್ರವಿಲ್ಲವೆಂದು ಶರ್ಮಾ , ಗೌರ್ ಅವರನ್ನು ನಿಂದಿಸಿದ್ದರು. ಧೋಬಿ ಜಾತಿಯ ವ್ಯಕ್ತಿಗಳು ನಮ್ಮಿಂದಿಗೆ ಕುಳಿತುಕೊಳ್ಳಬಹುದಾದರೆ, ನಮ್ಮ ಸ್ಥಾನಮಾನವೇನಾದೀತು. ನೀನಿಲ್ಲಿರುವುದು ನಮಗೆ ಬೇಕಾಗಿಲ್ಲ. ನಮ್ಮ ಕಾಲಬುಡದಲ್ಲಷ್ಟೇ ನಿನಗೆ ಜಾಗ ಇರುವುದು’’ ಎಂದು ಓಂಪ್ರಕಾಶ್ ಶರ್ಮಾ ನಿಂದಿಸಿದರೆಂದು ಗೌರ್ ಪತ್ರದಲ್ಲಿ ಆಪಾದಿಸಿದ್ದಾರೆ.
ಈ ಮಧ್ಯೆ ಎಐಸಿಸಿಯ ಪರಿಶಿಷ್ಟ ವಿಭಾದ ಅಧ್ಯಕ್ಷ ಕೆ.ರಾಜು ಅವರು ವಿಷಯದ ಬಗ್ಗೆ ತನಿಖೆ ನಡೆಸುವಂತೆ ಪಕ್ಷದ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ.