×
Ad

ತೈವಾನ್‌ನಲ್ಲಿ ಭೂಕಂಪ: ಕನಿಷ್ಠ 11 ಸಾವು

Update: 2016-02-07 00:01 IST

16 ಮಹಡಿಯ ಕಟ್ಟಡ ಕುಸಿತ; ಅವಶೇಷದ ಒಳಗೆ ಇನ್ನಷ್ಟು ಜನ

ತೈಪೆ, ಫೆ. 6: ತೈವಾನ್‌ನಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಐತಿಹಾಸಿಕ ನಗರ ತೈನಾನ್‌ನಲ್ಲಿ 16 ಮಹಡಿಗಳ ಅಪಾರ್ಟ್‌ಮೆಂಟೊಂದು ಕುಸಿದಿದೆ. ಕನಿಷ್ಠ 11 ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಅವಶೇಷದ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6.4ರಷ್ಟಿದ್ದ ಭೂಕಂಪಕ್ಕೆ ತೈನಾನ್ ನಗರ ನಲುಗಿದೆ. ಭೂಕಂಪದ ಹೆಚ್ಚಿನ ಪರಿಣಾಮ ಈ ನಗರದ ಮೇಲೆಯೇ ಆಗಿದೆ. ರಕ್ಷಣಾ ಕಾರ್ಯಕರ್ತರು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ನಾಲ್ಕು ಕಟ್ಟಡಗಳನ್ನೊಳಗೊಂಡ ಇಡೀ ಅಪಾರ್ಟ್‌ಮೆಂಟ್ ಸಂಕೀರ್ಣ ಕುಸಿದಿದೆ. ಇದರಲ್ಲಿ ಸುಮಾರು 100 ಕುಟುಂಬಗಳು ವಾಸಿಸುತ್ತಿದ್ದವು.


ಮೃತಪಟ್ಟವರಲ್ಲಿ 10 ದಿನದ ಹೆಣ್ಣು ಮಗು ಮತ್ತು ಇತರ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಸೇವೆ ತಿಳಿಸಿದೆ. ಈ ಅಪಾರ್ಟ್‌ಮೆಂಟ್‌ನಲ್ಲಿ ಚಾಂದ್ರಮಾನದ ಹೊಸ ವರ್ಷಕ್ಕಾಗಿ ಕುಟುಂಬ ಸದಸ್ಯರು ಒಟ್ಟಾಗಿದ್ದ ವೇಳೆ ದುರಂತ ಸಂಭವಿಸಿದೆ.
ನಗರದ ಇತರ ಕಡೆಗಳಲ್ಲೂ ಕಟ್ಟಡಗಳ ಅಡಿಗೆ ಸಿಲುಕಿ ಸಾವುಗಳು ಸಂಭವಿಸಿವೆ.
ಅವಶೇಷಗಳ ಒಳಗೆ ಎಷ್ಟು ಮಂದಿ ಇರಬಹುದೆಂಬ ನಿಖರ ಮಾಹಿತಿ ಅಧಿಕಾರಿಗಳ ಬಳಿ ಇಲ್ಲ. ಆದಾಗ್ಯೂ, ಕನಿಷ್ಠ 30 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದೆಂದು ಮಾಧ್ಯಮಗಳು ಅಂದಾಜಿಸಿವೆ.
ರಕ್ಷಣಾ ಕಾರ್ಯಾಚರಣೆಗಾಗಿ ಸುಮಾರು 800 ಸೈನಿಕರನ್ನು ನಿಯೋಜಿಸಲಾಗಿದೆ. ಅವರು ಪೊಲೀಸ್ ನಾಯಿಗಳ ನೆರವಿನಿಂದ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ರಕ್ಷಣಾ ಕಾರ್ಯಕರ್ತರು 250ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ. ಅವರ ಪೈಕಿ 40ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಕಟ್ಟಡದಲ್ಲಿ ಮಾಮೂಲಿಗಿಂತ ಹೆಚ್ಚು ಜನರಿರುವ ಸಾಧ್ಯತೆಯಿದೆ, ಯಾಕೆಂದರೆ, ಹೊಸ ವರ್ಷಾಚರಣೆಗಾಗಿ ಕುಟುಂಬ ಸದಸ್ಯರು ತಮ್ಮ ಮನೆಗಳಿಗೆ ಸಾಮಾನ್ಯವಾಗಿ ಹಿಂದಿರುಗುತ್ತಾರೆ ಎಂದು ಆಂತರಿಕ ಸಚಿವ ಚೆನ್ ವೀ-ಜೆನ್ ಹೇಳಿದರು.
ಅಪಾರ್ಟ್‌ಮೆಂಟ್‌ನ 96 ಮನೆಗಳಲ್ಲಿ 256 ಮಂದಿ ವಾಸಿಸುತ್ತಿದ್ದಾರೆ ಎಂಬುದಾಗಿ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಗರದಲ್ಲಿ ಎಂಟು ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಲಾಗಿದೆ ಹಾಗೂ 100ಕ್ಕೂ ಅಧಿಕ ಮಂದಿ ಅಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ತೈನಾನ್‌ನಾದ್ಯಂತ 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಹಾಗೂ 60 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಸುಮಾರು 4 ಲಕ್ಷ ಮಂದಿಗೆ ಕುಡಿಯುವ ನೀರಿಲ್ಲ ಹಾಗೂ 2,000ಕ್ಕೂ ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News