×
Ad

ಗ್ರಾಮಕರಣಿಕರ ನಿರ್ಲಕ್ಷದಿಂದ ಜಮಾಬಂದಿ ರದ್ದು

Update: 2016-02-07 00:23 IST

ಬೆಳ್ತಂಗಡಿ: ಗ್ರಾಮಕರಣಿಕರ ನಿರ್ಲಕ್ಷದಿಂದ ಜಮಾಬಂದಿ ಪರಿಶೀಲನೆಗೆ ಬೆಳ್ತಂಗಡಿ ತಾಲೂಕು ಕಚೇರಿಗೆ ಬಂದ ಜಿಲ್ಲಾಧಿಕಾರಿ, ಪರಿಶೀಲನೆ ನಡೆಸಲು ಸಾಧ್ಯವಾಗದೆ ಕಾರ್ಯಕ್ರಮವನ್ನೇ ರದ್ದುಪಡಿಸಿ ಮರಳಿದ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಕಂದಾಯ ವಿಭಾಗದ ಜಮಾಬಂದಿ ಕಾರ್ಯಕ್ರಮ ಶನಿವಾರ ನಿಗದಿಯಾಗಿತ್ತು. ಇದಕ್ಕಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಮಾಬಂದಿಯ ಕಡತಗಳನ್ನು ಪರಿಶೀ ಲಿಸಲು ಕ್ಲಪ್ತ ಸಮಯಕ್ಕೆ ಬೆಳ್ತಂಗಡಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಆದರೆ ಜಮಾ ಬಂದಿಯನ್ನು ನಿರ್ವಹಿಸಬೇಕಾಗಿದ್ದ ಗ್ರಾಮ ಕರಣಿಕರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ತಯಾರಿಯನ್ನು ನಡೆಸದೆ ಬಂದಿದ್ದರು. ಇದನ್ನು ನೋಡಿ ಜಿಲ್ಲಾಧಿಕಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಕರಣಿಕರನ್ನು ತರಾಟೆಗೆ ತೆಗೆದುಕೊಂಡ ಡಿಸಿ, ಮುಂದಿನ ಜಮಾಬಂದಿಗೆ ಎಲ್ಲರೂ ತಯಾರಾಗಿರಬೇಕು. ಎಲ್ಲ ಸಮರ್ಪಕ ದಾಖಲೆಗಳನ್ನು ಸಿದ್ಧಪಡಿ ಸಿಕೊಂಡಿರಬೇಕು. ಕೇಳಲಾಗುವ ಯಾವ ಮಾಹಿತಿಗೂ ಹಾರಿಕೆಯ ಉತ್ತರವನ್ನು ನೀಡಕೂಡದು ಎಂದು ಎಚ್ಚರಿಸಿ ಜಮಾಬಂದಿ ಕಾರ್ಯಕ್ರಮವನ್ನು ಮುಂದೂಡಿದರು.

ಪಾಠ ಮಾಡಿದ ಎಸಿ: ಡಿಸಿ ಸಿಟ್ಟಿನಿಂದ ತೆರಳಿದ ಬಳಿಕ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಪುತ್ತೂರು ಸಹಾಯಕ ಆಯುಕ್ತ ಡಾ. ರಾಜೇಂದ್ರ, ಇಲಾಖೆಯ ಎಲ್ಲ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ದಲ್ಲಾಳಿಗಳ ಹಾವಳಿ ತಪ್ಪಿಲ್ಲ ಎಂಬುದು ಗಮನಕ್ಕೆ ಬಂದಿದೆ. ಇಲಾಖೆಯಲ್ಲಿ ಸಮರ್ಪಕವಾಗಿ ಕೆಲಸಗಳು ಆಗುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದಲ್ಲಿ ಸಂಬಂಧಪಟ್ಟವರ ಮೇಲೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮುಂದಿನ ಜಮಾಬಂದಿಯ ದಿನಾಂಕದ ಮುಂಚಿತವಾಗಿ ಎಲ್ಲರೂ ಅದಕ್ಕೆ ಸಂಬಂಧ ಪಟ್ಟ ಕಡತಗಳನ್ನು ಸಿದ್ಧತೆಯಲ್ಲಿಡಬೇಕು ಎಂದು ಸಹಾಯಕ ಆಯುಕ್ತರು ಸೂಚಿಸಿದರು.

ಈ ಸಂದರ್ಭ ಅಪರ ಜಿಲ್ಲಾ ಧಿಕಾರಿ ಕುಮಾರ್, ಎಡಿಎಲ್‌ಆರ್ ಶ್ರೀನಿವಾಸ್, ತಹಶೀಲ್ದಾರ್ ಪ್ರಸನ್ನಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News