ಕಳವು ಆರೋಪಿ, ಸಿಪಿಎಂ ಮಾಜಿ ಮುಖಂಡ ಸೆರೆ
ಸಾಲ ಮರುಪಾವತಿಸುವುದಕ್ಕಾಗಿ ಕಳ್ಳತನಕ್ಕಿಳಿದಿದ್ದ ರಾಘವನ್
ಕಾಸರಗೋಡು: ತ್ರಿಕ್ಕರಿಪುರದ ಗಲ್ಫ್ ಉದ್ಯೋಗಿಯ ಮನೆಗೆ ನುಗ್ಗಿ ಕಳವಿಗೆತ್ನಿಸಿದ ಪ್ರಕರಣದ ಆರೋಪಿ, ಸಿಪಿಎಂ ಮುಖಂಡ ಸಿ.ರಾಘವನ್(53)ನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಈತ ವಳಿಯಪರಂಬದ ರಹಸ್ಯ ಕೇಂದ್ರವೊಂದರಲ್ಲಿ ತಲೆಮರೆಸಿಕೊಂಡ ಬಗ್ಗೆ ಮಾಹಿತಿ ಪಡೆದ ನೀಲೇಶ್ವರ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಇ. ಪ್ರೇಮ ರಾಜನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಗಲ್ಫ್ ಉದ್ಯೋಗಿ ಎಂ.ಕೆ. ಯೂನುಸ್‌ರ ಮನೆಯಿಂದ ಈತ ಕಳವಿಗೆತ್ನಿಸಿದ್ದನು. ಮನೆಯಲ್ಲಿನ ಸಿಸಿಟಿವಿ ದೃಶ್ಯಗಳಿಂದ ಈತನ ಕೃತ್ಯ ಬೆಳಕಿಗೆ ಬಂದಿತ್ತು. ತಲೆಮರೆಸಿಕೊಂಡಿದ್ದ ಈತನನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃತ್ಯ ಬೆಳಕಿಗೆ ಬಂದ ಬಳಿಕ ಈತನನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು. 2015ರ ಮೇ 13ರಂದು ತ್ರಿಕ್ಕರಿಪುರದ ಮೆಟ್ಟಮ್ಮಲ್‌ನ ಅಬ್ದುಲ್ಲ ಎಂಬವರ ಮನೆಯ ಹೆಂಚು ತೆಗೆದು 14 ಪವನ್ ಚಿನ್ನಾಭರಣ ಕಳವು ಪ್ರಕರಣ ಸೇರಿದಂತೆ ಆರು ಪ್ರಕರಣಗಳಲ್ಲಿ ಈತ ಶಾಮೀಲಾಗಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
2014ರಲ್ಲಿ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದರೂ ಯಾವುದೇ ವಸ್ತುಗಳು ಲಭಿಸಲಿಲ್ಲ. 2015ರ ಜುಲೈಯಿಂದ 2016ರ ತನಕ ನಾಲ್ಕು ಮನೆಗಳ್ಳತನ ನಡೆಸಿರುವುದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿಕ್ಕರಿಪುರ ಮಟ್ಟಮ್ಮಲ್ನ ಕೆ.ಸಿ.ಅಬ್ದುಲ್ಲರ ಮನೆಯ ಹೆಂಚು ತೆಗೆದು 16 ಪವನ್ ಚಿನ್ನಾಭರಣ ಮತ್ತು ಹಣವನ್ನು ಕಳವುಗೈದಿದ್ದನು. ಈ ಚಿನ್ನಾಭರಣವನ್ನು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡವಿಟ್ಟು ಈತ ಹಣ ಪಡೆದಿದ್ದನು. ಮನೆ ನಿರ್ಮಿಸಲು ಪಡೆದ ಸಾಲ ಮತ್ತು ಮೀನುಗಾರಿಕೆಗೆ ಪಡೆದ ಸಾಲ ಮರುಪಾವತಿಗೆ ಕಳವಿಗೆ ಮುಂದಾಗಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.