×
Ad

ಯುವತಿಯ ಅತ್ಯಾಚಾರ: ವ್ಯಕ್ತಿಯ ವಿರುದ್ಧ ದೂರು

Update: 2016-02-07 00:35 IST

ಬಜ್ಪೆ: ಹತ್ತೊಂಬತ್ತರ ಹರೆಯದ ಯುವತಿಯೊಬ್ಬಳನ್ನು 56 ರ ಹರೆಯದ ವ್ಯಕ್ತಿಯೋರ್ವರು ಬೆದರಿಸಿ ನಿರಂತರ ಅತ್ಯಾಚಾರ ಎಸಗಿದ ಘಟನೆ ಬಜಪೆ ಸಮೀಪದ ಕಟೀಲಿನಲ್ಲಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ಕಟೀಲು ನಿವಾಸಿ ಹರಿಶ್ಚಂದ್ರ ರಾವ್ ಯಾನೆ ಅಪ್ಪು ಭಟ್ ಎಂದು ಗುರುತಿಸಲಾಗಿದೆ.

ಕಟೀಲು ನಿವಾಸಿ ಅಪ್ಪುಭಟ್ ಮನೆಯ ಕೆಲಸಕ್ಕೆಂದು ಬರುತ್ತಿದ್ದ ಮನೆಯ ಸಮೀಪದ ಯುವತಿಯನ್ನು ಬೆದರಿಸಿ ನಿರಂತರ ಅತ್ಯಾಚಾರ ನಡೆಸಿದ್ದ. ಈ ವಿಚಾರವಾಗಿ ಮನನೊಂದು ಯುವತಿ ಆತನ ಮನೆಗೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದರು. ಅನಂತರ ಯುವತಿಯನ್ನು ಹೆದರಿಸಿ ಬಲವಂತವಾಗಿ ಮತ್ತೆ ಕೆಲಸಕ್ಕೆ ಬರುವಂತೆ ಮಾಡಿದ್ದ. ಮಾತ್ರವಲ್ಲದೆ, ವಿಷಯ ಯಾರಲ್ಲಾದರೂ ಬಾಯಿ ಬಿಟ್ಟರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಯುವತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅತ್ಯಾಚಾರ ಎಸಗಿದ ಪರಿಣಾಮ ಯುವತಿ ಗರ್ಭಿಣಿಯಾಗಿದ್ದು, ಈ ಬಗ್ಗೆ ಮೊದಲು ದೂರು ನೀಡಲು ತಯಾರಿ ನಡೆಸುತ್ತಿರುವಾಗ ದೂರವಾಣಿ ಮೂಲಕ ನನ್ನನ್ನು ಮತ್ತು ನನ್ನ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಕಾರಣ ಹೆದರಿ ದೂರು ನೀಡಿಲ್ಲ ಎಂದು ಯುವತಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

 ಪತ್ನಿ ಆತ್ಮಹತ್ಯೆ: ಇತ್ತೀಚೆಗೆ ಹರೀಶ್ಚಂದ್ರ ರಾವ್‌ರ ಪತ್ನಿ ನಾಗಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದೂರು ದಾಖಲಾಗಿತ್ತು. ನಾಗಲಕ್ಷ್ಮೀ ಪತಿಯ ಕಾಮ ಪುರಾಣ ತಿಳಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಾರ್ವಜನಿಕರು, ಸಂಶಯ ವ್ಯಕ್ತಪಡಿಸಿದ್ದಾರೆ.

ಯುವತಿ ಸ್ಥಳಾಂತರ: ಪ್ರಕರಣ ಬೆಳಕಿಗೆ ಬರುತ್ತಲೇ ಯುವತಿ ಹಾಗೂ ಕುಟುಂಬವನ್ನು ಅಪ್ಪುಭಟ್ ಬೆದರಿಸಿ ಅಪಹರಿಸಿ ಮಂಗಳೂರಿನ ವಸತಿಗೃಹವೊಂದರಲ್ಲಿರಿಸಿದ್ದ ಎನ್ನಲಾಗಿದೆ. ವಿಷಯ ತಿಳಿದ ಸ್ಥಳೀಯರು ಯುವತಿಯನ್ನು ಪತ್ತೆ ಹಚ್ಚಿ ಧೈರ್ಯ ತುಂಬಿದ ಬಳಿಕ ಯುವತಿ ದೂರು ನೀಡಲು ಮುಂದಾದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News