ಬಡಗಮಿಜಾರಿನಲ್ಲಿ ಕೊಟ್ಟಿಗೆಯಿಂದ ಎಳೆದೊಯ್ದು ಕರು ತಿಂದ ಚಿರತೆ
Update: 2016-02-07 10:35 IST
ಮೂಡುಬಿದಿರೆ, ಫೆ.7: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಮಂಜನಬೈಲು ಎಂಬಲ್ಲಿ ಕರುವೊಂದು ಚಿರತೆಗೆ ಆಹಾರವಾದ ಘಟನೆ ರವಿವಾರ ಮುಂಜಾನೆ ನಡೆದಿದೆ.
ಇಲ್ಲಿ ದೇವರ ಮನೆಯ ಬಾಲಕೃಷ್ಣ ರಾವ್ ಎಂಬವರಿಗೆ ಸೇರಿದ ಕರು ಇದಾಗಿದೆ. ಇಂದು ಮುಂಜಾನೆ ವೇಳೆಗೆ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ಸುಮಾರು 2 ವರ್ಷ ಪ್ರಾಯದ ಕರುವನ್ನು ಎಳೆದುಕೊಂಡು ಹೋಗಿ ಅಲ್ಲೇ ಸಮೀಪದಲ್ಲಿ ಅರ್ಧಭಾಗ ತಿಂದು ಹಾಕಿ ಓಡಿ ಹೋಗಿದೆ. ಈ ಘಟನೆಯು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಜಿ.ಡಿ.ದಿನೇಶ್, ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿ ಅಯ್ಯಣ್ಣ. ರಮೇಶ್ ಈ ವೇಳೆ ಜೊತೆಗಿದ್ದರು.