ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಕರಾವಳಿಯ ಕುವರ ಗುರುರಾಜ್
ಮಂಗಳೂರು, ಫೆ.7: ಗುವಾಹಟಿಯಲ್ಲಿ ನಡೆಯುತ್ತಿರುವ ದಕ್ಷಿಣ ಏಶ್ಯನ್ ಗೇಮ್ಸ್‌ನ ಮೊದಲ ದಿನವಾದ ಶನಿವಾರ ಭಾರತವು 19 ಪದಕಗಳನ್ನು ಗೆಲ್ಲುವ ಮೂಲಕ ಅಗ್ರ ಸ್ಥಾನ ಗಳಿಸಿದೆ. ಈ ಪೈಕಿ ಪುರುಷರ ವೇಟ್ ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಗುರುರಾಜ್ ಕರಾವಳಿಯ ಕುವರ ಎಂಬುದು ಹೆಮ್ಮೆಯ ಸಂಗತಿ.
ಪುರುಷರ ವೇಟ್‌ಲಿಫ್ಟಿಂಗ್ ಸ್ಪರ್ಧೆಯ 56 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದ ಗುರುರಾಜ ಕೊಲ್ಲೂರಿನವರು. ಇವರು ಬೆಳ್ತಂಗಡಿ- ಉಜಿರೆಯ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಕಳೆದ ವರ್ಷ(2015ರಲ್ಲಿ) ಇಲ್ಲಿ ಪದವಿ ಪೂರ್ಣಗೊಳಿಸಿದ್ದರು. ಬಳಿಕ ಸ್ನಾತಕೋತ್ತರ ಪದವಿಗಾಗಿ ಕಾಲೇಜಿಗೆ ಸೇರಿದ್ದರೂ ಭಾರತೀಯ ವಾಯುಸೇನೆಯಲ್ಲಿ ಉದ್ಯೋಗ ದೊರೆತ ಹಿನ್ನೆಲೆಯಲ್ಲಿ ಅದನ್ನು ಮುಂದುವರಿಸಿರಲಿಲ್ಲ.
ನೆಟ್‌ಬಾಲ್ ಆಟಗಾರ ಈಗ ವೇಟ್ ಲಿಫ್ಟರ್!
ಉತ್ತಮ ನೆಟ್‌ಬಾಲ್ ಆಟಗಾರನಾಗಿ ಗುರುತಿಸಿಕೊಂಡಿದ್ದ ಗುರುರಾಜ್ ಎಸ್‌ಡಿಎಂ ಕ್ರೀಡಾ ತರಬೇತಿ ಸಂಸ್ಥೆ ಸೇರಿದ ಬಳಿಕ ವೇಟ್ ಲಿಫ್ಟಿಂಗ್‌ನಲ್ಲಿ ಆಸಕ್ತಿ ಮೂಡಿಸಿಕೊಂಡು ಅದರಲ್ಲಿ ತರಬೇತಿ ಪಡೆದುಕೊಂಡರು. ಉತ್ತಮ ವೇಟ್ ಲಿಫ್ಟರ್ ಆಗಿ ಗುರುತಿಸಿಕೊಂಡ ಗುರುರಾಜ್ ಸತತ ಎರಡು ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಇವರ ಈ ಸಾಧನೆ ಅವರಿಗೆ ಉದ್ಯೋಗವೂ ಲಭಿಸಿತು. ಇದೀಗ ದಕ್ಷಿಣ ಏಶ್ಯನ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಅವರ ಗೆಲುವಿನ ಅಭಿಯಾನ ಮುಂದುವರಿದಿದೆ.
ದಕ್ಷಿಣ ಏಶ್ಯನ್ ಗೇಮ್ಸ್‌ನ ಮೊದಲ ದಿನವಾದ ಶನಿವಾರ ಭಾರತವು 14 ಚಿನ್ನ, 5 ಬೆಳ್ಳಿ ಸೇರಿದಂತೆ ಒಟ್ಟು 19 ಪದಕಗಳನ್ನು ಗೆಲ್ಲುವ ಮೂಲಕ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.