×
Ad

ಕಾಸರಗೋಡು : ಕೇರಳಕ್ಕೆ ಕೋಟ್ಯಾಂತರ ರೂ.ನ ಗಾಂಜಾ ಸಾಗಾಟ: ಇಡುಕ್ಕಿ ನಿವಾಸಿಯ ವಿಚಾರಣೆಯಲ್ಲಿ ಮಾಹಿತಿ ಬಯಲು

Update: 2016-02-07 16:58 IST

ಕಾಸರಗೋಡು: ಕಾಸರಗೋಡು ಸೇರಿದಂತೆ ಕೇರಳಾದ್ಯಂತ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ನಡೆಸುತ್ತಿರುವ ಪ್ರಮುಖ ತಂಡವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾಸರಗೋಡು ನಾರ್ಕೋಟಿಕ್ ಸೆಲ್ ಡಿವೈಎಸ್‌ಪಿ ಟಿ. ಪಿ. ಪ್ರೇಮರಾಜನ್ ಅವರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ. ತನಿಖೆಯಂಗವಾಗಿ ಉತ್ತರಭಾರತದ ರಾಜ್ಯಗಳಾದ ಒಡೀಶಾ, ಚತ್ತೀಸ್‌ಘಡ್, ಉತ್ತರಾಂಚಲವನ್ನು ಡಿವೈಎಸ್‌ಪಿಯವರ ನೇತೃತ್ವದಲ್ಲಿರುವ ಪೊಲೀಸರ ತಂಡ ಸಂದರ್ಶಿಸಿ ಮಾಹಿತಿ ಕಲೆ ಹಾಕಿದೆ. ಕೇರಳಕ್ಕೆ ಗಾಂಜಾ ಸಾಗಾಟ ನಡೆಸುತ್ತಿರುವ ತಂಡದ ಸೂತ್ರಧಾರ ಎಮದು ಶಂಕಿಸಲಾದ ಇಡುಕ್ಕಿ ನಿವಾಸಿ ರಾಜುಥೋಮಸ್‌ನನ್ನು ರಾಯ್‌ಘಡ್ ಜೈಲಿಗೆ ತಲುಪಿ ವಿಚಾರಣೆ ನಡೆಸಲಾಯಿತು. ಗಾಂಜಾ ಸಾಗಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಈತನನ್ನು ನ್ಯಾಯಾಲಯದ ಅನುಮತಿಯೊಂದಿಗೆ ವಿಚಾರಣೆಗೊಳಪಡಿಸಲಾಯಿತು. ಈತನಿಂದ ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಗಾಂಜಾ ಸಾಗಾಟ ನಡೆಸುತ್ತಿರುವ ಶೃಂಖಲೆಯ ಕುರಿತಾ ಪ್ರಧಾನ ಮಾಹಿತಿಗಳು ಲಭಿಸಿವೆ.

ಕೇರಳಕ್ಕೆ ಗಾಂಜಾ ಸಾಗಾಟ ಹೆಚ್ಚಿದ ಹಿನ್ನಲೆಯಲ್ಲಿ ರಾಜ್ಯ ಗೃಹ ಇಲಾಖೆಯ ಪ್ರತ್ಯೇಕ ನಿರ್ದೇಶನಾನ್ವಯ ಡಿವೈಎಸ್‌ಪಿಯವರ ನೇತೃತ್ವದಲ್ಲಿರುವ ಪೊಲೀಸ್ ತಂಡ ಉತ್ತರಭಾರತದ ರಾಜ್ಯಗಳಲ್ಲಿ ತನಿಖೆಗಾಗಿ ತೆರಳಿತ್ತು. ಗಾಂಜಾ ಸಾಗಾಟ ಹಾಗೂ ಗಾಂಜಾ ಕೃಷಿಯ ಕುರಿತಾ ಮಾಹಿತಿಗಳು ರಾಯಘಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲ ಸುಬ್ರಹ್ಮಣ್ಯನ್ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ವ್ಯಕ್ತವಾಗಿದೆ. ಇಡುಕ್ಕಿ ನಿವಾಸಿಯದ ರಾಜು ಥೋಮಸ್ ಮಾತ್ರವಲ್ಲದೆ ಹಲವಾರು ಕೇರಳೀಯರು ಛತ್ತೀಸ್‌ಘಡ್‌ನ ಜೈಲುಗಳಲ್ಲಿ ಗಾಂಜಾ ಪ್ರಕರಣದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.

ಇಡುಕ್ಕಿ ಜಿಲ್ಲೆಯ ರಾಜಕ್ಕಾಡ್, ಪಣಿಕ್ಕನ್‌ಗುಡಿ, ಮೃಗಶ್ಯೇರಿ ನಿವಾಸಿಗಳಾದ 30ರಷ್ಟು ಯುವಕರು ಒಡೀಶಾದ ಜೈಲಿನಲ್ಲಿದ್ದಾರೆ. ಇವರ ವಿರುದ್ಧ ಗಾಂಜಾ ಸಾಗಾಟ ಹಾಗೂ ಗಾಂಜಾ ಕೃಷಿ ಪ್ರಕರಣಗಳಿವೆ. ಬುಡಕಟ್ಟು ಜನಾಂಗದವರ ಪ್ರದೇಶಗಳನ್ನು ಕೇಂದ್ರೀಕರಿಸಿ ನಡೆಸುವ ಗಾಂಜಾ ಕೃಷಿಗೆ ಮಾವೋವಾದಿಗಳ ಸಹಾಯ ಇರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಪ್ರಧಾನ ಆದಾಯ ಮಾರ್ಗ ಎಂಬ ನೆಲೆಯಲ್ಲಿ ಮಾವೋವಾದಿಗಳು ಗಾಂಜಾ ಕೃಷಿಗೆ ಎಲ್ಲ ರೀತಿಯ ಸಹಾಯ ನೀಡುತ್ತಿರುವುದಾಗಿ ಹೇಳಲಾಗುತ್ತಿದೆ. ಗಾಂಜಾ ಬೆಳೆ ತೆಗೆದ ಬಳಿಕ ಮಾವೋವಾದಿಗಳ ಸಹಾಯದೊಂದಿಗೆ ಆಂಧ್ರಪ್ರದೇಶದ ಗಡಿಭಾಗದ ವರೆಗೆ ತಲುಪಿಸಲಾಗುತ್ತಿದೆ. ಅಲ್ಲಿಂದ ವಾಹನಗಳಲ್ಲೇರಿ ಕೇರಳ ಮೊದಲಾದೆಡೆಗೆ ಗಾಂಜಾ ಸಾಗಿಸಲಾಗುತ್ತಿದೆ. ಗಾಂಜಾ ಸಾಗಾಟಕ್ಕೆ ಪ್ರತ್ಯೇಕ ವಾಹನಗಳನ್ನು ಉಪಯೋಗಿಸುತ್ತಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಉತ್ತರಭಾರತದ ರಾಜ್ಯಗಳ ಗಾಂಜಾ ಕೃಷಿಗೆ ನೇತೃತ್ವ ನೀಡುತ್ತಿರುವುದು ಇಡುಕ್ಕಿ ಜಿಲ್ಲೆಯ ಹಿರಿಯ ಗಾಂಜಾ ಕೃಷಿಕನಾಗಿದ್ದರೂ ಗಾಂಜಾ ಸಾಗಾಟದ ಹಿಂದೆ ಕೇರಳದ ಕುಪ್ರಸಿದ್ಧ ವಾಹನ ಕಳವುಗಾರನಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

ಈ ತಂಡ ಗಾಂಜಾ ಸಾಗಾಟದತ್ತ ವಾಲಿರುವುದರಿಂದ ಇತ್ತೀಚಿಗಿನ ದಿನಗಳಲ್ಲಿ ಕಾಸರಗೋಡು ಹಾಗೂ ಇತರೆಡೆಗಳಲ್ಲಿ ಕೆಲ ತಿಂಗಳುಗಳಿಂದ ವಾಹನ ಕಳವು ಪ್ರಕರಣಗಳು ಕಡಿಮೆಯಾಗಿರುವುದಾಗಿ ಪೊಲೀಸ್ ತನಿಖೆ ಸ್ಪಷ್ಟಪಡಿಸಿದೆ. ಗಡಿಪ್ರದೇಶಕ್ಕೆ ತಲುಪುವ ಗಾಂಜಾ ಒಟ್ಟಾಗಿ ಒಬ್ಬ ಏಜೆಂಟ್ ಮೂಲಕ ಕಾಸರಗೋಡಿಗೆ ತಲುಪುತ್ತಿರುವುದಾಗಿ ತನಿಖಾ ತಂಡ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News