ಮಂಗಳೂರು : ಗಾರ್ಡಿಯನ್ ಇನ್‌ಫ್ರಾಸ್ಟ್ರಕ್ಚರ್‌ನ ಜಿಯೋನಿ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ
ಮಂಗಳೂರು,ಫೆ.7: ಕುಲಶೇಖರ ಕೋರ್ಡೆಲ್ ಚರ್ಚ್‌ನ ಬಳಿ ನಿರ್ಮಾಣಗೊಳ್ಳಲಿರುವ ಗಾರ್ಡಿಯನ್ ಇನ್‌ಫ್ರಾಸ್ಟ್ರಕ್ಚರ್‌ನ ಜಿಯೋನಿ ವಸತಿ ಸಮುಚ್ಚಯಕ್ಕೆ ಇಂದು ಕುಲಶೇಖರ ಹೋಲಿಕ್ರಾಸ್ ಚರ್ಚ್‌ನ ಧರ್ಮಗುರು ವಂ. ವಿಕ್ಟರ್ ಮಚಾದೋ ಪ್ರಾರ್ಥನೆಯೊಂದಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್‌ನ ಫಾ. ಲಿಯೋ ಡಿಸೋಜ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಜೆ . ಆರ್. ಲೋಬೋ ಮಂಗಳೂರು ನಗರದಲ್ಲಿ ಗಗನಚುಂಬಿಕಟ್ಟಡಗಳು ನಿರಂತರವಾಗಿ ತಲೆ ಎತ್ತುತ್ತಿದ್ದು ಇವುಗಳ ಬೇಡಿಕೆಗೆ ನಗರದಲ್ಲಿ ಶಾಂತಿ ನೆಲೆಸುವುದು ಮುಖ್ಯ. ನಗರದಲ್ಲಿ ಶಾಂತಿ,ಸೌಹಾರ್ದತೆ ಇದ್ದರೆ ನಗರದ ಅಭಿವೃದ್ದಿ ಸಾಧ್ಯವಾಗಲಿದೆ. ಪ್ರಜ್ಞಾವಂತ ಜನರು ಸಮಾಜದಲ್ಲಿ ಅಶಾಂತಿ ಕದಡುವ ಸಂದರ್ಭದಲ್ಲಿ ಅದನ್ನು ಖಂಡಿಸಿದರೆ ಸೌಹಾರ್ದದ ಬೆಳವಣಿಗೆ ಆಗುತ್ತದೆ. ಅದೇ ರೀತಿಯಲ್ಲಿ ನಗರಕ್ಕೆ ಮೂಲಭೂತ ಸೌಕರ್ಯ ನೀಡುವ ಇಂತಹ ಅಪಾರ್ಟ್‌ಮೆಂಟ್‌ಗಳ ಉದ್ಯಮ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮನಪಾ ಮೇಯರ್ ಜೆಸಿಂತಾ ವಿಜಯ್ ಆಲ್ಪ್ರೆಡ್ ಗುರುಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಸಾಧ್ಯ ಎಂಬುದನ್ನು ಗಾರ್ಡಿಯನ್ ಇನ್‌ಫ್ರಾಸ್ಟ್ರಕ್ಚರ್ ತೋರಿಸಿಕೊಟ್ಟಿದೆ ಎಂದು ಹೇಳಿದರು.
ಕ್ರೈಡೈ ಅಧ್ಯಕ್ಷ ಡಿ.ಬಿ. ಮೆಹ್ತಾ ಮಾತನಾಡಿ ಗಾರ್ಡಿಯನ್ ಇನ್‌ಫ್ರಾಸ್ಟ್ರಕ್ಚರ್‌ನ ಉದ್ಯಮದೊಂದಿಗೆ ಸಮಾಜಮುಖಿ ಚಟುವಟಿಕೆಗಳು ಶ್ಲಾಘನಾರ್ಹ. ಕ್ರೈಡೈಯ ಎಲ್ಲ ಬಿಲ್ಡರ್‌ಗಳು ಇಂತಹ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಭಯ್ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ದೇಶಕ ಡಾ. ಅಂಜನಪ್ಪ, ಮನಪಾ ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು, ಕಾರ್ಪೋರೇಟರ್ ಭಾಸ್ಕರ್, ಆರ್ಕಿಟೆಕ್ಟ್ ಧರ್ಮರಾಜ್,ಶಾಂತೇಗೌಡ,ಗಾರ್ಡಿಯನ್ ಇನ್‌ಫ್ರಾಸ್ಟ್ರಕ್ಚರ್ ಪಾಲುದಾರ ಕೇಶವ್, ಸಂತ ಅಲೋಶಿಯಸ್ ಕಾಲೇಜಿನ ಸ್ಟೀಬರ್ಟ್ ಡಿಸಿಲ್ವಾ, ಸಂತ ಅಲೋಶಿಯಸ್ ಕಾಲೇಜಿ ನ ರಿಜಿಸ್ಟ್ರಾರ್ ಡಾ. ನರಹರಿ, ನಿವೇಶನದ ಮಾಲಕ ವೆಲೆಂಟೈನ್ ಡಿ’ಸಿಲ್ವ, ಉಪಸ್ಥಿತರಿದ್ದರು.
ಗಾರ್ಡಿಯನ್ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೆಜಿಂಗ್ ಡೈರೆಕ್ಟರ್ ಗಣೇಶ್ ಎಂ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಪ್ರಜ್ಞಾ ಧನ್ಯವಾದ ಸಮರ್ಪಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.ಪರಿವಾದಿನಿ ಗ್ರೂಪ್ ನ ಪಂಚವೀಣಾ ಕಾನ್ಸರ್ಟ್‌ನಲ್ಲಿ ಸುಮಧುರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಅಂತಾರಾಷ್ಟ್ರೀಯ ಗುಣಮಟ್ಟದ ಶೌಚಾಲಯದ ಕೊಡುಗೆ
ಗಾರ್ಡಿಯನ್ ಇನ್‌ಫ್ರಾಸ್ಟ್ರಕ್ಚರ್ ತನ್ನ ಪ್ರತಿ ಅಪಾರ್ಟ್‌ಮೆಂಟ್ ನಿರ್ಮಾಣದ ಸಂದರ್ಭದಲ್ಲಿ ಸಿಎಸ್‌ಆರ್‌ನಡಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದೆ. ಹತ್ತನೆ ಯೋಜನೆಯಾಗಿರುವ ಜಿಯೋನಿ ವಸತಿ ಸಮುಚ್ಚಯದ ನೆನಪಿನಲ್ಲಿ ಕುಲಶೇಖರದ ಜನನಿಬಿಡ ಪ್ರದೇಶವನ್ನು ಗುರುತಿಸಿ ಅತ್ಯಾಧುನಿಕ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ಗಾರ್ಡಿಯನ್ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೆಜಿಂಗ್ ಡೈರೆಕ್ಟರ್ ಗಣೇಶ್ ಎಂ.ಪಿ. ತಿಳಿಸಿದರು.
ಮನಪಾವು ಶೌಚಾಲಯಕ್ಕೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದರೆ ಅಂತಾರಾಷ್ಟ್ರೀಯ ಗುಣಮಟ್ಟದ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ ಅವರು ಎರಡು ವರ್ಷ ಈ ಶೌಚಾಲಯದ ನಿರ್ವಹಣೆಯನ್ನು ಸಂಸ್ಥೆಯೆ ತೆಗೆದುಕೊಳ್ಳಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವಾಷ್‌ರೂಮ್ ನಂತೆ ಈ ಶೌಚಾಲಯವನ್ನು ಕಟ್ಟುವ ಗುರಿಯನ್ನು ಸಂಸ್ಥೆ ಹೊಂದಿದೆ. ಈ ಶೌಚಾಲಯ ಮಂಗಳೂರಿಗೆ ಮಾದರಿ ಶೌಚಾಲಯವಾಗಲಿದೆ ಎಂದು ಹೇಳಿದರು.
ಜಿಯೋನಿ ವಸತಿ ಸಮುಚ್ಚಯ ನಗರದ ಪ್ರಮುಖ ಪ್ರದೇಶವಾದ ಕುಲಶೇಖರದಲ್ಲಿ ಸುಂದರ ತಾಣದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಳ್ಳಲಿದೆ. 75 ಸೆಂಟ್ಸ್ ಜಾಗದಲ್ಲಿ 6 ಅಂತಸ್ತಿನಲ್ಲಿ 75 ಪ್ಲ್ಯಾಟ್‌ಗಳು ನಿರ್ಮಾಣಗೊಳ್ಳಲಿದೆ. ಒಂದು ಬಿಎಚ್‌ಕೆ, 2 ಬಿಎಚ್‌ಕೆ, 3 ಬಿಎಚ್‌ಕೆ ಪ್ಲ್ಯಾಟ್‌ಗಳು ನಿರ್ಮಾಣಗೊಳ್ಳಲಿದ್ದು ಸೋಲಾರ್ ವ್ಯವಸ್ಥೆ, 8 ಮಂದಿ ಸಾಮರ್ಥ್ಯದ 3 ಅಟೋಮೆಟಿಕ್ ಲಿಪ್ಟ್‌ಗಳು, ಶಬ್ದ ನಿರೋಧಕ ಜನರೇಟರ್, ಸೊಸೈಟಿ ರೂಂ, ಕಾರು ಪಾರ್ಕಿಂಗ್, ಯಾರ್ಡ್‌ಗಳಿಗೆ ಕಾಂಕ್ರಿಟ್ ಇಂಟರ್‌ಲಾಕಿಂಗ್ ಅಳವಡಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.