ಸಾಹಿತಿ ಬಾಳಿಲ ಕೃಷ್ಣ ಶಾಸ್ತ್ರಿ ನಿಧನ
ಮಂಗಳೂರು, ಫೆ.7: ಖ್ಯಾತ ಶಿಕ್ಷಣ ತಜ್ಞ, ಸಾಹಿತಿ ಬಾಳಿಲ ಕೃಷ್ಣ ಶಾಸ್ತ್ರಿ ಇಂದು ಸಂಜೆ ನಗರದ ನಿಧನ ಹೊಂದಿದರು.ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.ಮೂಲತಃ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ನಿವಾಸಿಯಾಗಿದ್ದ ಬಳಿಕ ಮಂಗಳೂರಿನ ಬಿಜೈಯಲ್ಲಿ ವಾಸವಾಗಿದ್ದರು. ಕಳೆದ ಒಂದು ವಾರದಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನ ಹೊಂದಿದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.ಕೃಷ್ಣ ಶಾಸ್ತ್ರಿ ಬಾಳಿಲ ಅವರು ವಿದ್ಯಾ ಬೋಧಿನಿ ಪ್ರೌಢ ಶಾಲೆಯ ಶಿಕ್ಷಕರಾಗಿ ಮತ್ತು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ, ಬಂಟ್ವಾಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ್ದ ಬಾಳಿಲ ಕೃಷ್ಣ ಶಾಸ್ತ್ರಿ ಅವರು ನೇರ, ನಿರ್ಭೀತ ಲೇಖನಗಳ ಮೂಲಕ ಸಮಾಜದಲ್ಲಿ ಜನಜಾಗೃತಿ ಮೂಡಿಸಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು, ಕಸಪಾ ಸದಸ್ಯ ಮಹೇಶ್ ಆರ್.ನಾಯಕ್ ಮೃತರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.