ಮುಂಬೈ ದಾಳಿಗೆ ಪಾಕ್ ಸರಕಾರದ ಬೆಂಬಲವಿತ್ತು ಡೇವಿಡ್ ಹೇಡ್ಲಿ ‘ಬಹಿರಂಗ’

Update: 2016-02-07 16:21 GMT

ಹೊಸದಿಲ್ಲಿ,ಫೆ.7: ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರೆ ತಯ್ಯಬಾ 26/11 ಮುಂಬೈ ಭಯೋತ್ಪಾದಕ ದಾಳಿಯ ಸಂಚನ್ನು ರೂಪಿಸಿತ್ತು ಹಾಗೂ ಅದಕ್ಕೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐನ ಸಮ್ಮತಿಯಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಡೇವಿಡ್ ಹೇಡ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ (ಎನ್‌ಐಎ) ಬಹಿರಂಗಪಡಿಸಿದ್ದಾನೆಂದು, ಸಿಎನ್‌ಎನ್-ಐಬಿಎನ್ ವಾಹಿನಿ ವರದಿ ಮಾಡಿದೆ.26/11 ಮುಂಬೈ ದಾಳಿಗೆ ಪಾಕ್ ಸರಕಾರದ ಬೆಂಬಲವೂ ಇತ್ತೆಂದು ಆತ ತಿಳಿಸಿದ್ದಾನೆನ್ನಲಾಗಿದೆ.ಮುಂಬೈ ದಾಳಿ ಸಂಚಿಗೆ ಸಂಬಂಧಿಸಿ, ಪಾಕ್ ಐಎಸ್‌ಐ ಅಧಿಕಾರಿಗಳಾದ ಮೇಜರ್ ಇಕ್ಬಾಲ್ ಹಾಗೂ ಸಮೀರ್ ಅಲಿ ತನಗೆ ಸೂಚನೆಗಳನ್ನು ನೀಡುತ್ತಿದ್ದರು ಹಾಗೂ ಲಷ್ಕರೆ ತಯ್ಯಬಾ ಉಗ್ರ ಝಕೀಯುರ್ರಹ್ಮಾನ್ ಲಖ್ವಿಯನ್ನು, ಐಎಸ್‌ಐ ಬ್ರಿಗೇಡಿಯರ್ ರಿವಾಝ್ ನಿಯಂತ್ರಿಸುತ್ತಿದ್ದರೆಂದು ಹೇಡ್ಲಿ ಎನ್‌ಐಎಗೆ ತಿಳಿಸಿದ್ದಾನೆ. 2008ರಲ್ಲಿ ನಡೆದ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಲಷ್ಕರೆ ತಯ್ಯಬಾ ಉಗ್ರ ಝಕಿಯುರ್ರಹ್ಮಾನ್ ಲಖ್ವಿ ಬಂಧಿಸಲ್ಪಟ್ಟ ಬಳಿಕ, ಆತನನ್ನು ಐಎಸ್‌ಐ ವರಿಷ್ಠ ಸುಝಾ ಪಾಶಾ ಭೇಟಿಯಾಗಿದ್ದರೆಂಬ ವಿಷಯವನ್ನೂ ಆತ ಬಹಿರಂಗಪಡಿಸಿರುವುದಾಗಿ ವರದಿ ತಿಳಿಸಿದೆ.ಮುಂಬೈ ಭಯೋತ್ಪಾದಕ ದಾಳಿ ಕಾರ್ಯಗತಗೊಳ್ಳುವ ಮೊದಲು ಹೇಡ್ಲಿ, ಹೊಸದಿಲ್ಲಿಯಲ್ಲಿರುವ ಉಪರಾಷ್ಟ್ರಪತಿಯ ನಿವಾಸ, ಇಂಡಿಯಾಗೇಟ್ ಹಾಗೂ ಸಿಬಿಐ ಕಚೇರಿ ಪ್ರದೇಶಗಳನ್ನು ತಾನು ಪರಿಶೀಲಿಸಿರುವುದನ್ನು ಹೇಡ್ಲಿ ಎನ್‌ಐಎ ಮುಂದೆ ಒಪ್ಪಿಕೊಂಡಿದ್ದಾನೆಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News