×
Ad

ಕ್ಯಾನ್ಸರ್‌ಗೆ ಚಿಕಿತ್ಸೆ ಸುಲಭ: ನ್ಯಾ. ಉಮಾ

Update: 2016-02-07 23:44 IST


ಮಂಗಳೂರು, ಫೆ.7: ಮಹಿಳೆಯರನ್ನು ಕ್ರೂರವಾಗಿ ಕಾಡುವ ಸ್ತನ ಕ್ಯಾನ್ಸರ್ ಕುರಿತಂತೆ ಮಾಹಿತಿಯ ಕೊರತೆ ಹಾಗೂ ಮುಜುಗರದಿಂದಾಗಿ ತಡೆಗಟ್ಟಲು ಅಸಾಧ್ಯವಾಗುತ್ತಿದ್ದು, ಪ್ರಾಥಮಿಕ ಹಂತದಲ್ಲೇ ರೋಗದ ಗುಣಲಕ್ಷಣಗಳನ್ನು ಗುರುತಿಸುವ ಮೂಲಕ ಸುಲಭ ಚಿಕಿತ್ಸೆ ಮಾಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಮಾ ಎಂ.ಜಿ. ಹೇಳಿದ್ದಾರೆ.  ನಗರದ ಪಾಂಡೇಶ್ವರ ಬಳಿಯ ಸೈಂಟ್ ಆ್ಯನ್ಸ್ ಕಾಲೇಜ್ ಆಫ್ ಎಜುಕೇಶನ್ ಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶನಿವಾರ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮತ್ತು ಆಸ್ತಿ ಹಕ್ಕಿನ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಸ್ತಿ ಹಕ್ಕಿನ ಕುರಿತಂತೆ ಮಾತನಾಡಿದ ನ್ಯಾ.ಉಮಾ ಎಂ.ಜಿ., ತಂದೆ ಹಾಗೂ ಗಂಡನ ಆಸ್ತಿಯಲ್ಲಿ ಮಹಿಳೆಯರ ಹಕ್ಕಿನ ಬಗ್ಗೆ ಇನ್ನೂ ಜಾಗೃತಿ ಹೆಚ್ಚಾಗಿ ಇಲ್ಲವಾಗಿದೆ. ಇಂದು ಹಣದ ವ್ಯಾಮೋಹದಿಂದಾಗಿ ಮಾನವೀಯ ಸಂಬಂಧಗಳು ಹದಗೆಡುತ್ತಿವೆ. ದ.ಕ. ಜಿಲ್ಲೆಯಲ್ಲಿ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ 1,641 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಈ ಬಗ್ಗೆ ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲು ವಕೀಲರು ಸಹಕರಿಸಬೇಕು ಎಂದು ಹೇಳಿದರು. ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಅಧೀಕ್ಷಕ ಡಾ.ಶರಣಪ್ಪಎಸ್.ಡಿ., ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಕಾಲೇಜಿನ ಪ್ರಾಂಶುಪಾಲ ಸಿಸ್ಟರ್ ಕ್ಲಾರ ಎ.ಸಿ., ಬಂಟ್ವಾಳ ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸ್ತನ ಕ್ಯಾನ್ಸರ್ ತಜ್ಞ ಡಾ.ವೆಂಕಟೇಶ್ ಸಂಜೀವ ಹಾಗೂ ನ್ಯಾಯವಾದಿ ಎ.ಉದಯಾನಂದ ಮಾಹಿತಿ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ಬಿ. ಸ್ವಾಗತಿಸಿದರು. ಪೊಲೀಸ್ ಉಪ ಆಯುಕ್ತ ಡಾ.ಎಂ.ಸಂಜೀವ ಪಾಟೀಲ್ ವಂದಿಸಿದರು. ಅನಿತಾ ಕಿಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News