×
Ad

ಮಂಗಳೂರು : ರಾಜ್ಯ ದೃಷ್ಟಿ ನೀತಿ ಸಮಿತಿ ಚರ್ಚೆ; * 6ರಿಂದ 16 ವರ್ಷದ ಶಾಲಾ ಮಕ್ಕಳಿಗೆ ಉಚಿತ ಕನ್ನಡಕದ ತೀರ್ಮಾನ

Update: 2016-02-08 17:55 IST

ಮಂಗಳೂರು, ಫೆ. 8: ಕರ್ನಾಟಕ ರಾಜ್ಯವನ್ನು ಅಂಧ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೇ ರಚನೆಯಾಗಿರುವ ರಾಜ್ಯ ದೃಷ್ಠಿ ನೀತಿ ಸಮಿತಿಯ ಸಭೆ ಆರೋಗ್ಯ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಇಂದು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆಯಿತು.

ರಾಜ್ಯದಲ್ಲಿನ ಗುಣಪಡಿಸಲಾಗುವ ದೃಷ್ಟಿದೋಷಗಳನ್ನು ಹುಟ್ಟಿನಿಂದಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಹಿರಿಯಲ್ಲಿ ಕಂಡುಬರುವ ದೃಷ್ಟಿದೋಷಗಳ ನಿವಾರಣೆಗಾಗಿ ಈಗಾಗಲೇ ನಡೆಸಲಾಗುತ್ತಿರುವ ಕಣ್ಣಿನ ಪೊರೆಯ ಉಚಿತ ಶಸ್ತ್ರ ಚಿಕಿತ್ಸೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವುದು ಹಾಗೂ ಸಮರ್ಪಕ ವ್ಯವಸ್ಥೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಈಗಾಗಲೇ ಸರಕಾರವು ದಂತ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಅದರಂತೆಯೇ ದೃಷ್ಟಿ ದೋಷ ಇರುವವರಿಗೆ ದೃಷ್ಟಿ ಭಾಗ್ಯ ಯೋಜನೆಯ ಮೂಲಕ ಚಿಕಿತ್ಸೆ ನೀಡಲು ಸರಕಾರಿ ಹಾಗೂ ಖಾಸಗಿ ಕಣ್ಣಿನ ಆಸ್ಪತ್ರೆಗಳ ನೆರವಿನಲ್ಲಿ ಸರಕಾರ ಮುಂದಾಗಲಿದೆ. ಈ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯ ದೃಷ್ಟಿ ನೀತಿ ಸಮಿತಿಯನ್ನು ರಚಿಸಲಾಗಿದ್ದು, ಅದರ ಮೂಲಕ 1ನೆ ತರಗತಿ ಪ್ರವೇಶದ ಸಂದರ್ಭ ದೃಷ್ಟಿ ದೋಷ ತಪಾಸಣೆ ಕಡ್ಡಾಯಗೊಳಿಸುವುದು. ದೃಷ್ಟಿದೋಷವುಳ್ಳ 6 ರಿಂದ 16 ವರ್ಷದೊಳಗಿನ (1ರಿಂದ 10ನೆ ತರಗತಿಯ ) ಶಾಲಾ ಮಕ್ಕಳಿಗೆ ಉಚಿತ ಕನ್ನಡಕಗಳನ್ನು ನೀಡುವ ಮೂಲಕ ಮಕ್ಕಳಲ್ಲಿನ ದೃಷ್ಟಿ ದೋಷವನ್ನು ನಿಯಂತ್ರಿಸುವುದು ಹಾಗೂ 40 ವರ್ಷ ಮೇಲ್ಪಟ್ಟ ಬಿಪಿಎಲ್ ಕುಟಂಬದವರಿಗೆ ಉಚಿತ ಕನ್ನಡಕಗಳನ್ನು ವಿತರಿಸಲು ಸಮರ್ಪಕ ಕ್ರಮಗೊಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಸಚಿವ ಖಾದರ್ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ ದೃಷ್ಠಿ ಪೋಷಣೆ ಸೇವೆಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ‘ನ್ಯಾಷನಲ್ ಪ್ರೋಗ್ರಾಮ್ ಆ್ ಕಂಟ್ರೋಲ್ ಆ್ ಬ್ಲೈಂಡ್‌ನೆಸ್(ಎನ್‌ಪಿಸಿಬಿ) ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನೇತ್ರಶಾಸ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ದೃಷ್ಠಿನೀತಿ ಸಮಿತಿ ಸೂಕ್ತ ಯೋಜನೆಯನ್ನು ಸಿದ್ಧಪಡಿಸಬೇಕು. ಮುಂದಿನ ಬಜೆಟ್‌ನಲ್ಲಿ ಸೂಕ್ತ ಅನುದಾನದ ಕುರಿತಂತೆ ಪ್ರಸ್ತಾವಿಸಲಾಗುವುದು ಎಂದು ಸಚಿವ ಖಾದರ್ ಹೇಳಿದರು.

ದೃಷ್ಠಿ ನೀತಿ ಸಮಿತಿಯ ನಿರ್ದೇಶಕ ಡಾ.ರಾಮ್‌ದೇವ್, ತಾಂತ್ರಿಕ ಸಮಿತಿಯ ಮುಖ್ಯಸ್ಥ ಡಾ.ಕೃಷ್ಣ ಪ್ರಸಾದ್, ಡಾ.ಚಂದ್ರಶೇಖರ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿದೇವಿ ಮತ್ತಿತರರು ಉಪಸ್ಥಿತರಿದ್ದರು.

ನೇತ್ರಶಾಸ್ತ್ರಜ್ಞರ ಕೊರತೆ ನೀಗಿಸಲು ಸಲಹೆ

ರಾಜ್ಯದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಗಳಲ್ಲಿ ನೇತ್ರಶಾಸ್ತ್ರಜ್ಞರು ಹಾಗೂ ನೇತ್ರ ತಪಾಸಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳ ಕೊರತೆ ಇದ್ದು, ಈ ಬಗ್ಗೆ ದೃಷ್ಟಿ ನೀತಿ ಸಮಿತಿ ಗಮನ ಹರಿಸಬೇಕು. ಅಗತ್ಯ ಇರುವಲ್ಲಿಗೆ ಹೊಸ ಉಪಕರಣಗಳನ್ನು ಪೂರೈಕೆ ಮಾಡುವುದು, ಅವುಗಳ ನಿರ್ವಹಣೆ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ನೇತ್ರ ತಪಾಸಣಾ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯನಡೆಸಬೇಕು. ಇದಕ್ಕಾಗಿ ತಾಲೂಕು ಆಸ್ಪತ್ರೆಗಳಲ್ಲಿ ನೇತ್ರಶಾಸ್ತ್ರ ಘಟಕಗಳನ್ನು ಹಂತ ಹಂತವಾಗಿ ತೆರೆಯಬೇಕು ಎಂದು ಸಚಿವ ಯು.ಟಿ.ಖಾದರ್ ಸಲಹೆ ನೀಡಿದರು.

ರಾಜ್ಯದಲ್ಲಿ ಈಗಾಗಲೇ ಆರೋಗ್ಯ ಬಂಧು ಯೋಜನೆಯನ್ನು ಕೈಬಿಡಲಾಗಿದೆ. ಮೆಡಿಕಲ್ ಕೌನ್ಸಿಲ್ ಆ್ ಇಂಡಿಯಾ(ಎಂಸಿಎ) ನಿಯಮದ ಪ್ರಕಾರ ಪ್ರತಿ ಖಾಸಗಿ ಆಸ್ಪತ್ರೆಗಳು ತಮ್ಮ ವ್ಯಾಪ್ತಿಯ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದತ್ತು ತೆಗೆದುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಹೆಚ್ಚುವರಿಯಾಗಿ ಇನ್ನೂ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದತ್ತು ಪಡೆಯುವಂತೆ ರಾಜ್ಯ ಸರಕಾರ ಸೂಚಿಸಲಿದ್ದು, ಇದರಿಂದ ಇದರಿಂದ ಗ್ರಾಮೀಣ ಭಾಗದ ಜನರಿಗೆ ಪ್ರಯೋಜನವಾಗಲಿದೆ ಎಂದು ಸಚಿವ ಖಾದರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News