ಬೋಸ್ನಿಯ: ಶಿರವಸ್ತ್ರ ನಿಷೇಧಕ್ಕೆ ಮಹಿಳೆಯರ ಪ್ರತಿಭಟನೆ
ಸರಜೇವೊ, ಫೆ. 8: ನ್ಯಾಯಾಲಯಗಳು ಮತ್ತು ಇತರ ನ್ಯಾಯಾಂಗ ಸಂಸ್ಥೆಗಳಲ್ಲಿ ತಲೆವಸ್ತ್ರಗಳನ್ನು ಧರಿಸುವುದರ ಮೇಲೆ ವಿಧಿಸಲಾಗಿರುವ ನಿಷೇಧವನ್ನು ವಿರೋಧಿಸಿ ಬೋಸ್ನಿಯದ ಸುಮಾರು 2,000 ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ನಿಷೇಧದ ವ್ಯಾಪ್ತಿಯಲ್ಲಿ ಎಲ್ಲ ಧಾರ್ಮಿಕ ಸಂಕೇತಗಳು ಒಳಪಡುತ್ತವೆಯಾದರೂ, ಹಿಜಾಬ್‌ನ್ನು ಮಾತ್ರ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ರಾಜಧಾನಿ ಸರಜೇವೊದಲ್ಲಿ ಮಹಿಳೆಯರು ಒಂದು ಗಂಟೆ ಕಾಲ ನಿಷೇಧದ ವಿರುದ್ಧ ಇಂದು ಪ್ರತಿಭಟನೆ ನಡೆಸಿದರು.
ಬೋಸ್ನಿಯ ಯುಗೋಸ್ಲೋವಿಯದ ಭಾಗವಾಗಿದ್ದಾಗ, ಕಮ್ಯುನಿಸ್ಟ್ ಆಡಳಿತದ ಅವಧಿಯಲ್ಲಿ ಮಹಿಳೆಯರು ತಲೆವಸ್ತ್ರ (ಹಿಜಾಬ್) ಧರಿಸುವುದನ್ನು ನಿಷೇಧಿಸಲಾಗಿತ್ತು. 1992ರವರೆಗೂ ಬೋಸ್ನಿಯ ಯುಗೋಸ್ಲೋವಿಯದ ಭಾಗವಾಗಿತ್ತು. 1992ರಲ್ಲಿ ಬೋಸ್ನಿಯ ತನ್ನನ್ನು ತಾನು ಸ್ವತಂತ್ರ ಎಂದು ಘೋಷಿಸಿಕೊಂಡಿತು.
ನ್ಯಾಯಾಂಗ ಸಂಸ್ಥೆಗಳಲ್ಲಿ ‘‘ಧಾರ್ಮಿಕ ಸಂಕೇತ’’ಗಳನ್ನು ನಿಷೇಧಿಸುವ ಬೋಸ್ನಿಯದ ಉನ್ನತ ನ್ಯಾಯಾಂಗ ಮಂಡಳಿಯ ನಿರ್ಧಾರದ ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದಾರೆ.
ಮುಸ್ಲಿಮ್ ಮಹಿಳೆಯರ ಕೆಲಸ ಮಾಡುವ ಹಕ್ಕನ್ನು ಕಿತ್ತುಕೊಳ್ಳುವ ಉದ್ದೇಶದಿಂದ ನಿಷೇಧ ವಿಧಿಸಲಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದವರು ಆರೋಪಿಸಿದ್ದಾರೆ.
‘‘ನಿಷೇಧವು ಮುಸ್ಲಿಮ್ ಘನತೆ, ವ್ಯಕ್ತಿತ್ವ ಮತ್ತು ಗುರುತಿನ ಮೇಲೆ ನಡೆಯುತ್ತಿರುವ ಗಂಭೀರ ದಾಳಿಯಾಗಿದೆ’’ ಎಂದು ಪ್ರತಿಭಟನೆಯ ಸಂಘಟಕಿ ಸಮೀರಾ ಝುನಿಕ್ ವೆಲಾಗಿಕ್ ಹೇಳುತ್ತಾರೆ.
ಬೋಸ್ನಿಯದ 38 ಲಕ್ಷ ಜನಸಂಖ್ಯೆಯ ಪೈಕಿ ಸುಮಾರು 40 ಶೇಕಡ ಮುಸ್ಲಿಮರು. ಇತರರು ಬಹುತೇಕ ಆರ್ತಡಾಕ್ಸ್ ಅಥವಾ ಕ್ಯಾಥೊಲಿಕ್ ಕ್ರೈಸ್ತರು.