ಅವಶೇಷಗಳಡಿಯಿಂದ ಇಬ್ಬರ ರಕ್ಷಣೆ: ತೈವಾನ್ ಭೂಕಂಪ - 37 ದಾಟಿದ ಮೃತರ ಸಂಖ್ಯೆ

Update: 2016-02-08 14:40 GMT

ತೈನಾನ್ (ತೈವಾನ್), ಫೆ. 8: ತೈವಾನ್‌ನ ತೈನಾನ್ ನಗರದಲ್ಲಿ ಭೂಕಂಪದಿಂದಾಗಿ ಕುಸಿದ ಅಪಾರ್ಟ್‌ಮೆಂಟ್ ಕಟ್ಟಡವೊಂದರ ಅವಶೇಷಗಳ ಅಡಿಯಿಂದ 50 ಗಂಟೆಗಳ ಬಳಿಕ ಸೋಮವಾರ ಇಬ್ಬರನ್ನು ರಕ್ಷಿಸಲಾಗಿದೆ.
ದಕ್ಷಿಣದ ನಗರ ತೈನಾನ್‌ನಲ್ಲಿ ಕುಸಿದ ಕಟ್ಟಡದ ಒಳಗಿನಿಂದ ಓರ್ವ ವ್ಯಕ್ತಿಯನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು. ಇದಕ್ಕೂ ಮೊದಲು ಓರ್ವ ಮಹಿಳೆಯನ್ನೂ ರಕ್ಷಿಸಲಾಗಿತ್ತು.
ಶನಿವಾರ ಸಂಭವಿಸಿದ 6.4ರ ತೀವ್ರತೆಯ ಭೂಕಂಪದಿಂದಾಗಿ ಕುಸಿದ ಕಟ್ಟಡಗಳಡಿಯಲ್ಲಿ ಇನ್ನೂ 100ಕ್ಕೂ ಅಧಿಕ ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ನಂಬಲಾಗಿದೆ. ಮೃತಪಟ್ಟವರ ಸಂಖ್ಯೆ 37ನ್ನೂ ಮೀರಿದೆ.
40 ವರ್ಷ ಪ್ರಾಯದ ಲೀ ತ್ಸಾಂಗ್-ಶಿಯನ್ ಎಂಬ ವ್ಯಕ್ತಿಯನ್ನು ಅವಶೇಷಗಳ ಅಡಿಯಿಂದ ಮೇಲೆತ್ತಲು ರಕ್ಷಣಾ ಕಾರ್ಯಕರ್ತರು 20 ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿದರು. ಆತನ ಕಾಲು ಅವಶೇಷಗಳಡಿ ಸಿಲುಕಿಕೊಂಡಿದ್ದರಿಂದ ಮೇಲೆತ್ತಲು ಸಾಧ್ಯವಾಗಿರಲಿಲ್ಲ.
ಆತನ ಕಾಲನ್ನು ಕತ್ತರಿಸಿದರೆ ರಕ್ಷಿಸಲು ಸಾಧ್ಯವಾಗಬಹುದೇ ಎಂಬುದನ್ನು ತಿಳಿದುಕೊಳ್ಳಲು ಅಲ್ಲಿಗೆ ವೈದ್ಯರನ್ನು ಕಳುಹಿಸಲಾಗಿತ್ತು. ಆದರೆ, ಶಸ್ತ್ರಕ್ರಿಯೆಗೆ ಅಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲ ಎಂಬುದಾಗಿ ವೈದ್ಯರು ಅಭ್ಪಿಪ್ರಾಯಪಟ್ಟರು.
‘‘ಕಟ್ಟಡದ ತಳದಿಂದ ಆತನನ್ನು ಎಳೆಯುವಂತೆ ಸಿವಿಲ್ ಇಂಜಿನಿಯರ್‌ಗಳು ನಮಗೆ ಸಲಹೆ ಮಾಡಿದರು’’ ಎಂದು ತೈನಾನ್ ಮೇಯರ್ ವಿಲಿಯಮ್ ಲಾಯ್ ತಿಳಿಸಿದರು.
ಆತನ ಎರಡೂ ಕಾಲುಗಳು ಮತ್ತು ಒಂದು ಕೈಗೆ ಗಂಭೀರ ಗಾಯವಾಗಿದೆ.
ಬದುಕುಳಿದ ಮಹಿಳೆಯ ಬೊಬ್ಬೆ ಕೇಳಿದ ರಕ್ಷಣಾ ಕಾರ್ಯಕರ್ತರು ಆಕೆಯತ್ತ ತೆರಳಿ ರಕ್ಷಿಸಿದರು. ಆದರೆ, ಆಕೆಯ ಗಂಡ ಮತ್ತು ಎರಡು ವರ್ಷದ ಮಗುವಿನ ಶವಗಳನ್ನು ಮೇಲೆತ್ತಲಾಯಿತು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದರು.
ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವ ಆಕೆಯ ಇತರ ಐವರು ಕುಟುಂಬ ಸದಸ್ಯರಿಗಾಗಿ ರಕ್ಷಣಾ ಕಾರ್ಯಕರ್ತರು ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News