ಚಿನ್ನ ಖರೀದಿಗೆ ಪಾನ್‌ಕಾರ್ಡ್ ಮಿತಿಯನ್ನು 5ಲಕ್ಷಕ್ಕೆ ಹೆಚ್ಚಿಸಲು ಮನವಿ
ಕೇಂದ್ರ ಸರಕಾರವು ಕಪ್ಪು ಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2ಲಕ್ಷ ರೂಪಾಯಿ ಚಿನ್ನ ಖರೀದಿದಾರರಿಗೆ ಪಾನ್‌ಕಾರ್ಡ್ ಕಡ್ಡಾಯ ಗೊಳಿಸಿದ್ದು ಇದನ್ನು 5ಲಕ್ಷ ರೂಪಾಯಿಗೆ ಏರಿಸಬೇಕೆಂದು ಮೂಡುಬಿದಿರೆ ಚಿನ್ನಬೆಳ್ಳಿ ವರ್ತಕರ ಸಂಘ ಮೂಡುಬಿದಿರೆ ತಹಸೀಲ್ದಾರರ ಮೂಲಕ ಕೇಂದ್ರ ವಿತ್ತ ಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಿದೆ. ಕಪ್ಪು ಹಣವನ್ನು ನಿಯಂತ್ರಿಸಲು ಈ ಕಾನೂನು ತರಲಾಗುತ್ತಿದ್ದು ಇದರಿಂದ ಹೆಚ್ಚಿನ ಗ್ರಾಹಕರು ತೆರಿಗೆ ವ್ಯಾಪ್ತಿಗೆ ಬರುವ ಆತಂಕದಿಂದ ಚಿನ್ನ ಖರೀದಿಸಲು ಹಿಂಜರಿಯುತ್ತಾರೆ. ಈ ನಿರ್ಧಾರವನ್ನು ಬದಲಾಯಿಸಿ ಈ ಮಿತಿಯನ್ನು ಕನಿಷ್ಠ 5ಲಕ್ಷಕ್ಕೆ ಏರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮೂಡುಬಿದಿರೆ ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ರಾಮದಾಸ ಪೈ ಮನವಿ ಸಲ್ಲಿಸಿದ್ದು ತಹೀಲ್ದಾರರ ಪರವಾಗಿ ಕಂದಾಯ ಅಧಿಕಾರಿ ಹರಿಣಿ ಮನವಿ ಸ್ವೀಕರಿಸಿದರು. ಸಂಘದ ಕಾರ್ಯದರ್ಶಿ ರವಿಚಂದ್ರ ಆಚಾರ್ಯ, ಜೊತೆಕಾರ್ಯದರ್ಶಿ ಅರವಿಂದ ವೈ ಆಚಾರ್ಯ, ಸದಸ್ಯ ಯೋಗೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಬುಧವಾರ ದೇಶಾದ್ಯಂತ ಚಿನ್ನಬೆಳ್ಳಿ ವ್ಯಾಪಾರಸ್ಥರು ಬಂದ್ ನಡೆಸುವ ಹಿನ್ನೆಲೆಯಲ್ಲಿ ಮೂಡುಬಿದಿರೆಯಲ್ಲಿಯೂ ಎಲ್ಲಾ ಚಿನ್ನಾಭರಣ ಅಂಗಡಿಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಲಾಗುವುದು ಎಂದು ರಾಮದಾಸ ಪೈ ತಿಳಿಸಿದ್ದಾರೆ.