×
Ad

ಜಿ.ಪಂ., ತಾ.ಪಂ. ಚುನಾವಣೆಗಳಲ್ಲಿ ಗೆಲುವು: ಖಾದರ್ ವಿಶ್ವಾಸ

Update: 2016-02-09 21:43 IST

ಮಂಗಳೂರು, ಫೆ. 9: ಫೆಬ್ರವರಿ 20ರಂದು ನಡಯಲಿರುವ ದ.ಕ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಇಂದು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್‌ನ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಲಿದ್ದು, ತಾಲೂಕು ಪಂಚಾಯತ್‌ನಲ್ಲಿ ಶೇ. 80ರಷ್ಟು ಅಭ್ಯರ್ಥಿಗಳು ಜಯ ದಾಖಲಿಸಲಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಯೋಜನೆ ಮತ್ತು ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಜಯ ದಾಖಲಿಸಲಿದ್ದಾರೆ ಎಂದರು. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಅಧಿಕಾರಕ್ಕೆ ಬರುವ ಮುನ್ನ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಅಚ್ಛೇ ದಿನಗಳು ಇಂದೂ ಬಂದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌ನ ಬೆಲೆ ಕನಿಷ್ಠ ರೂ. 30 ಬೆಲೆ ಇಳಿಕೆಯಾಗಬೇಕಾಗಿತ್ತು. ಆದರೆ ಕೇಂದ್ರ ಸರಕಾರ ತೈಲದ ಮೇಲೆ ಇನ್ನಷ್ಟು ತೆರಿಗೆ ಏರಿಸುವ ಮೂಲದ ದೇಶದ ಜನರಿಗೆ ತೈಲ ಬೆಲೆ ಇಳಿಕೆಯ ಲಾಭ ದೊರೆಯದಂತೆ ಮಾಡಿದೆ ಎಂದರು.

ಬೆಂಗಳೂರಿನಲ್ಲಿ ‘ನಮ್ಮೂರ ಹಬ್ಬ’

ಅಭಿನಂದನ ಸಾಂಸ್ಕೃತಿ ಟ್ರಸ್ಟ್ ವತಿಯಿಂದ ಫೆಬ್ರವರಿ 13 ಮತ್ತು 14ರಂದು ಬೆಂಗಳೂರಿನ ಜಯನಗರದ 5ನೆ ಹಂತದಲ್ಲಿರುವ ಚಂದ್ರಗುಪ್ತ ವೌರ್ಯ ಕ್ರೀಡಾಂಗಣದಲ್ಲಿ (ಶಾಲಿನಿ ಗ್ರೌಂಡ್) ‘ನಮ್ಮೂರ ಹಬ್ಬ’ ಹಮ್ಮಿಕೊಳ್ಳಲಾಗಿದೆ ಎಂದು ‘ನಮ್ಮೂರ ಹಬ್ಬ’ದ ಗೌರವ ಸಲಹೆಗಾರವೂ ಆಗಿರುವ ಸಚಿವ ಯು.ಟಿ.ಖಾದರ್ ತಿಳಿಸಿದರು.

 ಈ ಹಬ್ಬದ ಮೂಲಕ ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ,ಜನಪದ ಆಚರಣೆ, ಕ್ರೀಡೆ, ಜೀವನಶೈಲಿಯ ಶ್ರೀಮಂತಿಕೆ ಮತ್ತು ಕರಾವಳಿಯ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗರಿಗೆ ಪರಿಚಯಿಸಲಿದೆ ಎಂದರು.

‘ನಮ್ಮೂರ ಹಬ್ಬ’ದ ಸಂಚಾಲಕ ಬೇಳೂರು ರಾಘವೇಂದ್ರ ಶೆಟ್ಟಿ ಮಾತನಾಡಿ, ಕಾರ್ಯಕ್ರಮವು ಫೆ. 13ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನೆಗೊಳ್ಳಲಿದೆ. ಕಸಪಾ ಮಾಜಿ ಅಧ್ಯಕ್ಷ ಪುಂಡಲಿಕ ಹಾಲಂಬಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಸ್ಥಳೀಯ ಶಾಸಕರಾದ ಬಿ.ಎನ್.ವಿಜಯಕುಮಾರ್ ಭಾಗವಹಿಸಲಿದ್ದಾರೆ ಎಂದರು.

ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ಈ ವರ್ಷದ ಪ್ರತಿಷ್ಟಿತ ‘ಕಿರೀಟ ಪ್ರಶಸ್ತಿ’ಯನ್ನು ಸಂಘ ಸಂಸ್ಥೆಗಳ ವಿಭಾಗದಲ್ಲಿ ಹೊಟೇಲ್ ಉದ್ಯಮದವರ ಶ್ರೇಯೋಭಿವೃದ್ಧಿಗಾಗಿ ಕಳೆದ 49 ವರ್ಷಗಳಿಂದ ಶ್ರಮಿಸಿದ ‘ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ’ಕ್ಕೆ ಮತ್ತು ವೈಯಕ್ತಿ ವಿಭಾಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಪದ್ಮಶ್ರೀ ಡಾ.ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರಿಗೆ ಪ್ರದಾನ ಮಾಡಲಿರುವುದಾಗಿ ರಾಘವೇಂದ್ರ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಿ.ಎನ್.ನರಸಿಂಹ, ಉದ್ಯಮಿ ಸುರೇಶ್ ಎನ್.ಶೆಟ್ಟಿ, ಯಕ್ಷಗಾನ ಕಲಾವಿದ ಸೀತಾರಾಂ ಕಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News