ನಕಲಿ ಅಂಕಪಟ್ಟಿ ತಯಾರಿಕೆ: ಅಂತಾರಾಜ್ಯ ಜಾಲ ಪತ್ತೆ

Update: 2016-02-09 18:28 GMT

ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಫೆ.9: ನಕಲಿ ಅಂಕ ಪಟ್ಟಿ ತಯಾರಿಸುತ್ತಿದ್ದ ಬೃಹತ್ ಅಂತಾರಾಜ್ಯ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ನಗರದ ಕಮಿಷನರ್ ಕಚೇರಿ ಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಎಂ. ವಿವರ ನೀಡಿದರು. ನಗರದ ಕಂಕನಾಡಿ-ಪಂಪ್‌ವೆಲ್ ರಸ್ತೆಯಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇಂಜಿನಿಯರಿಂಗ್ ಎಂಬ ಕಾಲೇಜಿನ ಕಚೇರಿಯಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ಹಾಗೂ ಶಿಕ್ಷಣ ಸಂಸ್ಥೆಗಳ ನಕಲಿ ಪ್ರಮಾಣ ಪತ್ರವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪೆರ್ಮನ್ನೂರು ಚೆಂಬುಗುಡ್ಡೆಯ ನಿವಾಸಿ ಅಸ್ಕಾನ್ ಶೇಖ್ (22) ಮತ್ತು ಕೂಳೂರಿನ ರಾಯಿಕಟ್ಟೆ ನಿವಾಸಿ ಗೌತಮ್ ಆರ್. (32) ಎಂಬವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
 ಆರೋಪಿಗಳು ಆಗ್ರಾದ ಡಾ.ಭೀಮ ರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯ, ಬೆಳಗಾವಿಯ ವಿ.ಟಿ.ಯು., ರಾಜಸ್ಥಾನದ ಶ್ರೀಧರ ವಿಶ್ವವಿದ್ಯಾನಿಲಯ, ಮೇಘಾಲಯದ ಶಿಲ್ಲಾಂಗ್‌ನ ಟೆಕ್ನೋ ಗ್ಲೋಬ್ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್, ಅಸ್ಸಾಂನ ಕುಮಾರ್ ಭಾಸ್ಕರ್‌ವರ್ಮಾ ಸಂಸ್ಕೃತ್ ಆ್ಯಂಡ್ ಏನ್ಸಿಯೆಂಟ್ ಸ್ಟಡೀಸ್ ಯುನಿವರ್ಸಿಟಿ, ಆಲ್ ಇಂಡಿಯಾ ಹೈಯರ್ ಎಜುಕೇಶನ್ ಬೋರ್ಡ್, ಮಂಗಳೂರು ಇನ್‌ಸ್ಟಿಟ್ಯೂಟ್‌ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇಂಜಿನಿಯರಿಂಗ್, ಬೆಂಗಳೂರಿನ ಅಲ್ಫಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಟೆಕ್ನಾಲಜಿ ಸಯನ್ಸ್ ಮೊದಲಾದ ವಿಶ್ವವಿದ್ಯಾನಿಲಯಗಳು ಹಾಗೂ ವಿದ್ಯಾ ಸಂಸ್ಥೆಗಳ ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು ಎಂದು ಕಮಿಷನರ್ ವಿವರಿಸಿದರು.
ಆರೋಪಿಗಳು 150ಕ್ಕೂ ಅಧಿಕ ಮಂದಿಗೆ ಎಸೆಸೆಲ್ಸಿ, ಪಿಯುಸಿ, ಡಿಗ್ರಿ ಹಾಗೂ ಡಿಪ್ಲೊಮಾ, ಬಿಟೆಕ್, ಪದವಿಗಳ ನಕಲಿ ಅಂಕ ಪಟ್ಟಿಗಳನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದು ಕಮಿಷನರ್ ಚಂದ್ರಶೇಖರ್ ತಿಳಿಸಿದರು.
ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಅಸ್ಕಾನ್ ಶೇಖ್, ಅನಂತರ ಮಂಗಳೂರು ಇನ್‌ಸ್ಟಿಟ್ಯೂಟ್‌ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇಂಜಿನಿಯರಿಂಗ್ ಎಂಬ ಸಂಸ್ಥೆಯನ್ನು 2015ರ ಜೂನ್‌ನಲ್ಲಿ ಪ್ರಾರಂಭಿಸಿದ್ದ. ಸಂಸ್ಥೆಯಲ್ಲಿ ಸಿವಿಲ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್‌ನ 3 ವರ್ಷದ ಡಿಪ್ಲೊಮಾ ತರಬೇತಿಯನ್ನು ನೀಡುತ್ತಿದ್ದು, ಆದರೆ, ಈ ಡಿಪ್ಲೊಮಾಗಳಿಗೆ ಯಾವುದೇ ವಿಶ್ವವಿದ್ಯಾನಿಲಯದ ಮಾನ್ಯತೆ ಇಲ್ಲ. ಇನ್ನೋರ್ವ ಆರೋಪಿ ಗೌತಮ್ ಮಾರ್ಕೆಟಿಂಗ್ ವೃತ್ತಿಯನ್ನು ಮಾಡಿಕೊಂಡಿದ್ದು, ಪ್ರಸ್ತುತ ಹಣಕ್ಕಾಗಿ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡು ತ್ತಿದ್ದ ಎಂದವರು ಗ್ರಾಂ ಸ್ಟಿಕ್ಕರ್‌ಗಳು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತ ಚಂದ್ರಶೇಖರ್ ತಿಳಿಸಿದರು.

ಆರೋಪಿಗಳು ನಕಲಿ ಅಂಕಪಟ್ಟಿಗಾಗಿ ಸಂಸ್ಥೆಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಅವರ ಮಾಹಿತಿಯನ್ನು ಪಡೆದು ವಾರದೊಳಗೆ ಅವರಿಗೆ ಬೇಕಾದ ಡಿಗ್ರಿಗಳ ಅಂಕಪಟ್ಟಿಗಳನ್ನು ತಯಾರಿಸಿ ನೀಡುತ್ತಿದ್ದರು. ಆ ಸಂಸ್ಥೆಯಲ್ಲಿ ಎಸೆಸೆಲ್ಸಿ, ಪಿಯುಸಿ ನಕಲಿ ಅಂಕಪಟ್ಟಿಗೆ 10,000 ಮತ್ತು ಡಿಗ್ರಿ ಹಾಗೂ ಡಿಪ್ಲೊಮಾ ಅಂಕಪಟ್ಟಿಗಾಗಿ 35,000 ರೂ. ಅಲ್ಲದೆ, ಎಂಬಿಎ ಅಂಕಪಟ್ಟಿಗೆ 45,000 ರೂ. ದರವನ್ನು ನಿಗದಿಪಡಿಸಿ ಮಾರಾಟ ಮಾಡುತ್ತಿದ್ದರು. ಇದಲ್ಲದೆ, ಮಂಗಳೂರು ಪಬ್ಲಿಕ್ ಸ್ಕೂಲ್ ಎಂಬ ನಕಲಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಇದೇ ಶಿಕ್ಷಣ ಸಂಸ್ಥೆಯಲ್ಲಿ 10ನೆ ತರಗತಿಯಲ್ಲಿ ವ್ಯಾಸಂಗ ಮಾಡಿರುತ್ತಾರೆ ಎಂಬುದಾಗಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಎಸೆಸೆಲ್ಸಿ ಅಂಕಪಟ್ಟಿಗಳನ್ನೂ ತಯಾರಿಸಿ ಮಾರಾಟ ಮಾಡುತ್ತಿದ್ದರು.
               -ಚಂದ್ರಶೇಖರ್ ಎಂ., ಮಂಗಳೂರು ನಗರ ಪೊಲೀಸ್ ಆಯುಕ್ತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News