ಮತಗಟ್ಟೆ ಅಧಿಕಾರಿಗಳ ಹೆಸರು ಬದಲು: ಶಿಕ್ಷಣ ಇಲಾಖೆಯ ಸಿಬ್ಬಂದಿ ಅಮಾನತು
Update: 2016-02-10 23:48 IST
ಉಡುಪಿ, ಫೆ.10: ಜಿಪಂ-ತಾಪಂ ಚುನಾವಣೆಗೆ ಸಂಬಂಧಿಸಿ ಹೊರಡಿಸಲಾದ ಮತಗಟ್ಟೆ ಅಧಿಕಾರಿಗಳ ನೇಮಕಾತಿ ಆದೇಶದಲ್ಲಿನ ಹೆಸರುಗಳನ್ನು ಬದಲಾಯಿಸಿದ ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಮ ಕೆ. ಅವರನ್ನು ಅಮಾನತುಗೊಳಿಸಲಾಗಿದೆ.
ರಾಮ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯ ಪೂರ್ವಾನುಮತಿಯಿಲ್ಲದೆ ಮತಗಟ್ಟೆ ಅಧಿಕಾರಿಗಳ ಪಟ್ಟಿಯಲ್ಲಿ 30 ಸಿಬ್ಬಂದಿಯ ಹೆಸರುಗಳನ್ನು ಬದಲಾಯಿಸಿ ಅಲ್ಲಿ ಬೇರೆ ಅಧಿಕಾರಿಗಳ ಹೆಸರುಗಳನ್ನು ಅಂಟಿಸಿದ್ದರು. ಸರಕಾರಿ ಕೆಲಸದಲ್ಲಿ ನಿರ್ಲಕ್ಷ ಹಾಗೂ ಮೇಲಧಿಕಾರಿಗಳ ಆದೇಶವನ್ನು ದುರುಪಯೋಗಪಡಿಸಿರುವ ಆರೋಪದಲ್ಲಿ ಅವರನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿಯ ಸೂಚನೆಯಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಮಾನತುಗೊಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.