ವೀರ ಯೋಧ ಹನುಮಂತಪ್ಪ ಕೊಪ್ಪದ್ ಹುತಾತ್ಮ

Update: 2016-02-11 08:21 GMT



ಹೊಸದಿಲ್ಲಿ , ಫೆ. 10: ಸಿಯಾಚಿನ್ ನಲ್ಲಿ 35 ಅಡಿ ಆಳದ ಹಿಮದಲ್ಲಿ 6 ದಿನ ಇದ್ದೂ ಜೀವಂತ ಸಿಕ್ಕಿದ್ದ ರಾಜ್ಯದ ಯೋಧ ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಕೊಪ್ಪದ್  ಗುರುವಾರ 11.45  ಕ್ಕೆ ನಿಧನರಾಗಿದ್ದಾರೆಂದು ದೆಹಲಿಯ ಸೇನಾ ಆಸ್ಪತ್ರೆಯ ಮೂಲಗಳು ವರದಿ ಮಾಡಿದೆ. 


ಕೊಪ್ಪದ್ ಅವರಿಗೆ ನ್ಯುಮೋನಿಯ ಆಗಿದ್ದು ಅವರ ಯಕೃತ್ತು ಹಾಗು ಮೂತ್ರ ಜನಕಾಂಗ ಕೆಲಸ ನಿಷ್ಕ್ರಿಯವಾಗಿದ್ದವು . ತೀವ್ರ ಆಘಾತಕ್ಕೊಳಗಾಗಿರುವ ಅವರ ರಕ್ತದೊತ್ತಡ ಕಡಿಮೆಯಾಗಿತ್ತು.  ನುರಿತ ವೈದ್ಯರ ದೊಡ್ಡ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದು ತೀವ್ರ ನಿಗಾದಲ್ಲಿದ್ದರು . 


ಧೀರ ಕನ್ನಡಿಗ ಯೋಧ  ಹನುಮಂತಪ್ಪ 
ಕರ್ನಾಟಕದ ಹೆಮ್ಮೆಯ ಯೋಧ ಹನುಮಂತಪ್ಪ ತಮ್ಮ ಒಟ್ಟು ಸೇವಾವಧಿಯಲ್ಲಿ 13 ವರ್ಷಗಳ ಕಾಲ ಅತ್ಯಂತ ಕಷ್ಟಕರ ಹಾಗು ಭಾರೀ ಸವಾಲಿನ ಪ್ರದೇಶಗಳಲ್ಲೇ ಸೇವೆ ಸಲ್ಲಿಸುವ ಮೂಲಕ ದೇಶದ ರಕ್ಷಣೆ ಮಾಡಿದ್ದರು. 2003 ರಿಂದ 2006 ರವರೆಗೆ ಕಾಶ್ಮೀರದ ಮಾಹೊರ್ ನಲ್ಲಿ ಸೇವೆಯಲ್ಲಿದ್ದ ಅವರು ಉಗ್ರಗಾಮಿಗಳ ವಿರುದ್ಧ ಹೋರಾಡಿದ್ದರು. ಮತ್ತೆ 2008 ರಿಂದ 2010 ರವರೆಗೆ ಕಾಶ್ಮೀರದಲ್ಲಿ ಹಾಗು 2010 ರಿಂದ 2012 ರವರೆಗೆ ಈಶಾನ್ಯ ಭಾರತದಲ್ಲಿ ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದರು. ಆಗಸ್ಟ್ 2015 ರಿಂದ ಅವರು ಸಿಯಾಚಿನ್ ನಲ್ಲಿ ಸೇವೆಯಲ್ಲಿದ್ದರು.  

ಸಿಯಾಚಿನ್ ಗೇ ಸವಾಲು 
ವಿಶ್ವದ ಅತ್ಯಂತ ಎತ್ತರದ ಹಾಗು ಅಪಾಯಕಾರಿ ಸಿಯಾಚಿನ್ ಹಿಮಶಿಖರದಲ್ಲಿ ಕರ್ತವ್ಯದಲ್ಲಿದ್ದ ಮದ್ರಾಸ್ ರೆಜಿಮೆಂಟ್ ನ 10 ಯೋಧರ ಮೇಲೆ ಹಿಮಗೋಡೆಯೊಂದು ಕಳೆದ ಗುರುವಾರ ಕುಸಿದು ಬಿದ್ದ ಪರಿಣಾಮ ಅವರು ಕಾಂಕ್ರೀಟ್ ಗಿಂತಲೂ ಗಟ್ಟಿಯಿರುವ ಹಿಮದ 35 ಅಡಿ ಆಳದಲ್ಲಿ ಬಹುತೇಖ ಜೀವಂತ ಸಮಾಧಿಯಾಗಿದ್ದರು. ಅಲ್ಲಿ ಮೈನಸ್ 55 ಡಿಗ್ರಿ ಉಷ್ಣಾಂಶ ದಲ್ಲಿ ವಿಶೇಷ ಪಡೆಗಳಿಂದ  ರಕ್ಷಣಾ ಕಾರ್ಯಾಚರಣೆ ನಡೆಯಿತು. ಎಲ್ಲ 10 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ಪ್ರಕಟಿಸಿತ್ತು.  ಆದರೆ ಹನುಮಂತಪ್ಪ ಪವಾಡ ಸದೃಶವಾಗಿ ಜೀವಂತ ಪತ್ತೆಯಾಗಿದ್ದರು. ಆದರೂ ಅವರ ಪರಿಸ್ಥಿತಿ ಗಂಭೀರವಾಗಿತ್ತು. ಅವರಿಗೆ ದೆಹಲಿಯ ವಿಶೇಷ ಸೇನಾ ಆಸ್ಪತ್ರೆಯಲ್ಲಿ ಅನುಭವೀ ವೈದ್ಯರ ತಂಡ ಅತ್ಯುತ್ತಮ ಚಿಕಿತ್ಸೆ ನೀಡಿದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. 

ಹಾಸನದ ಸುಬೇದಾರ್ ನಾಗೇಶ್ ಹಾಗು ಮೈಸೂರಿನ ಎಚ್. ಡಿ . ಕೋಟೆಯ ಸಿಪಾಯಿ ಮಹೇಶ ಸಿಯಾಚಿನ್ ನಲ್ಲಿ ಹುತಾತ್ಮರಾದ ಇತರ ಇಬ್ಬರು ಕನ್ನಡಿಗ ಯೋಧರು. 

ಸಿಯಾಚಿನ್ ನಲ್ಲಿ ಹುತಾತ್ಮರಾದ ಹತ್ತು ಯೋಧರ ಹೆಸರು , ಹುದ್ದೆ ಹಾಗು ತವರು ರಾಜ್ಯದ ಪಟ್ಟಿ ಇಲ್ಲಿದೆ :

    ಸಿಯಾಚಿನ್‌ನಲ್ಲಿ ಸಂಭವಿಸಿದ ಭಾರೀ ಹಿಮಪಾತದಲ್ಲಿ ಕರ್ನಾಟಕದ ಹಾಸನ ಜಿಲ್ಲೆಯ ಬೆಟದೂರು ಗ್ರಾಮದ ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಕೊಪ್ಪದ್ ಸೇರಿದಂತೆ ಹತ್ತು ಮಂದಿ ಸೈನಿಕರನ್ನು ಭಾರತ ಕಳೆದುಕೊಂಡಿದೆ. ಘಟನೆಯಲ್ಲಿ ತಮಿಳುನಾಡಿನ ನಾಲ್ವರು, ಕರ್ನಾಟಕದ ಮೂವರು ಹಾಗೂ ಕೇರಳ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಸುಬೇದಾರ್ ನಾಗೇಶ ಟಿ.ಟಿ (ತೇಜೂರು ಗ್ರಾಮ, ಹಾಸನ ಜಿಲ್ಲೆ, ಕರ್ನಾಟಕ)
ಹವೀಲ್ದಾರ್ ಏಳುಮಲೈ ಎಂ. (ದುಕ್ಕಂ ಪರೈ, ವೆಲ್ಲೂರು, ತಮಿಳುನಾಡು)
ಲಾನ್ಸ್ ಹವೀಲ್ದಾರ್ ಎಸ್. ಕುಮಾರ್ (ಕುಮನಂ ತೋಝು, ತೇನಿ, ತಮಿಳುನಾಡು)
ಲಾನ್ಸ್ ನಾಯ್ಕ್ ಸುಧೀಶ್ ಬಿ. (ಮನ್ರೊತ್ತುರುತ್ತ್, ಕೊಲ್ಲಂ, ಕೇರಳ)
ಸಿಪಾಯಿ ಮಹೇಶ ಪಿ.ಎನ್. (ಎಚ್.ಡಿ.ಕೋಟೆ, ಮೈಸೂರು, ಕರ್ನಾಟಕ)
ಸಿಪಾಯಿ ಗಣೇಶನ್ ಜಿ. (ಚೊಕ್ಕದೇವನ್‌ಪಟ್ಟಿ, ಮಧುರೈ, ತಮಿಳುನಾಡು)
ಸಿಪಾಯಿ ರಾಮಮೂರ್ತಿ (ಗುಡಿಸ್ಥಾನಪಳ್ಳಿ, ಕೃಷ್ಣಗಿರಿ, ತಮಿಳುನಾಡು)
ಸಿಪಾಯಿ ಮುಸ್ತಾಖ್ ಅಹ್ಮದ್ ಎಸ್. (ಪರ್ನಪ್ಪಲ್ಲೆ, ಕರ್ನೂಲ್, ಆಂಧ್ರಪ್ರದೇಶ)
ಸಿಪಾಯಿ ನರ್ಸಿಂಗ್ ಅಸಿಸ್ಟೆಂಟ್ ಸೂರ್ಯವಂಶಿ ಎಸ್.ವಿ. (ಮಸ್ಕರವಾಡಿ, ಸತಾರ, ಮಹಾರಾಷ್ಟ್ರ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News