ಕೃತಕ ಸೂರ್ಯನನ್ನೇ ಸೃಷ್ಟಿಸಿದ ಚೀನಾ ವಿಜ್ಞಾನಿಗಳು !
ನವದೆಹಲಿ: 'ಕೃತಕ ಸೂರ್ಯ'ನನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮಹತ್ಮದ ಹೆಜ್ಜೆ ಇಟ್ಟಿರುವ ಚೀನಾ, ಸೂರ್ಯನ ತಾಪಮಾನಕ್ಕಿಂತ ಮೂರು ಪಟ್ಟು ಹೆಚ್ಚು ಉಷ್ಣಾಂಶ ಹೊಂದಿರುವ ಜಲಜನಕ ಅನಿಲವೊಂದನ್ನು ಸಂಶೋಧಿಸುವಲ್ಲಿ ಸಫಲವಾಗಿದೆ.
ಈ ಪ್ರಯೋಗ ಫಲಿತಾಂಶ ನೀಡುವ ಹಂತಕ್ಕೆ ತಲುಪಿದರೆ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆಯಾಗಿ, ವಿಶ್ವದ ಇಧನ ಬಿಕ್ಕಟ್ಟಿಗೆ ಪರಿಹಾರ ಸಿಗಲಿದೆ. ಜತೆಗೆ ಎಷ್ಟು ಬಳಸಿದರೂ ಮುಗಿಯದ ಸೂರ್ಯನಂತಹುದೇ ಮತ್ತೊಂದು ಇಂಧನ ಮೂಲ ಜಗತ್ತಿಗೆ ಸಿಕ್ಕಂತಾಗಲಿದೆ.
ಚೀನಾದ ಹೆಫೆಯಲ್ಲಿರುವ ಭೌತ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಬೃಹತ್ ಕಾಂತೀಯ ಫ್ಯೂಷನ್ ರಿಯಾಕ್ಟರ್ ಬಳಸಿ ಹೈಡ್ರೋಜನ್ ಅನಿಲ ಸೃಷ್ಟಿಸಿದ್ದಾರೆ. ಈ ಅನಿಲದ ಉಷ್ಣಾಂಶ 102 ಸೆಕೆಂಡ್ ಗಳ ಕಾಲ 50 ದಶ ಲಕ್ಷ ಕೆಲ್ವಿನ್ (49.999 ದಶಲಕ್ಷ ಡಿಗ್ರಿ) ಇರವಂತೆ ನೋಡಿಕೊಂಡಿದ್ದಾರೆ. ಸೂರ್ಯನ ತಾಪಮಾನ 15 ದಶಲಕ್ಷ ಕೆಲ್ವಿನ್ ಎಂಬ ಕಲ್ಪನೆಯಿದೆ. ಹೀಗಾಗಿ ಚೀನಾ ವಿಜ್ಞಾನಿಗಳು ಸೃಷ್ಟಿಸಿದ ಜಲಜನಕ ಅನಿಲದ ತಾಪಮಾನ ಸೂರ್ಯನ ತಾಪಮಾನಕ್ಕಿಂತ ಮೂರು ಪಟ್ಟು ಅಧಿಕವಾಗಿದೆ.
ವಿಶ್ವದ ಇಂಧನ ಬರ ನೀಗಿಸುವ ನಿಟ್ಟಿನಲ್ಲಿ ಇಂತಹ ಸಂಶೋಧನೆಗಳು ಮಹತ್ವದ್ದೇ ಆದರೂ ತಾರ್ಕಿಕ ಘಟ್ಟ ತಲುಪಲು ಅಪಾರ ಸಮಯ ಹಿಡಿಯುತ್ತದೆ. ಏಕೆಂದರೆ, ಚೀನಾ ಈಗ ಮಾಡಿರುವ ಪ್ರಯೋಗವನ್ನೇ ಜರ್ಮನಿ ಈ ಹಿಂದೆ ಮಾಡಿತ್ತು. ಚೀನಾದ ಸೃಷ್ಟಿಸಿರುವ ಉಷ್ಣಾಂಶಕ್ಕಿಂತ ಅಧಿಕ ತಾಪಮಾನವನ್ನು ಶೋಧಿಸಿತ್ತಾದರೂ, ಅದು ಹೆಚ್ಚು ಕಾಲ ಇರುವಂತೆ ನೋಡಿಕೊಳ್ಳುವಲ್ಲಿ ವಿಫಲವಾಗಿತ್ತು.
ಸೂರ್ಯನಿಗಿಂತ ಅಧಿಕ ತಾಪದ ಜಲ ಜನಕವನ್ನು ಚೀನಾ ಸೃಷ್ಟಿಸಿದೆಯಾದರೂ, ವಿದ್ಯುತ್ ಮೂಲವಾಗಿ ಅದನ್ನು ಬಳಸಿಕೊಳ್ಳುವ ಹಂತ ತಲುಪಲು ದಶಕಗಳೇ ಹಿಡಿಯಬಹುದು ಎಂದು ವಿಶ್ಲೇಷಣೆಗಳಿವೆ.
ಪೆಟ್ರೋಲ್, ಡೀಸೆಲ್ ನಂತಹ ಪಳೆ ಯುಳಿಕೆ ಇಂಧನಗಳ ಮೇಲೆ ಹೆಚ್ಚಾಗಿ ಅವಲಂಬನೆಯಾಗಿರುವ ಜಗತ್ತಿಗೆ ಅತ್ಯಂತ ಪರಿಣಾಮಕಾರಿಯಾದ ಪರ್ಯಾಯ ಇಂಧಣ ಹುಡುಕಲು ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಈ ಕಾರ್ಯದಲ್ಲಿ ಚೀನಾ ಕೂಡ ಮುಳುಗಿದ್ದು 250 ಕೋಟಿ ರೂ. ಹೂಡಿಕೆ ಮಾಡಿದೆ.