ಮಂಗಳೂರು : ಮತದಾರರ ಆಮಿಷದ ಬಗ್ಗೆ ಅಭ್ಯರ್ಥಿಗಳ ನಿಗಾಕ್ಕೆ ಅಧಿಕಾರಿಗಳಿಗೆ ಸೂಚನೆ
ಮಂಗಳೂರು,ಫೆ.11: ಚುನಾವಣಾ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಣದ ಆಮಿಷ, ಸಾಮಾಗ್ರಿಗಳ ವಿತರಣೆ ಮಾಡದಂತೆ ಜಾಗರೂಕರಾಗಿರಬೇಕು ಎಂದು ಜಿಲ್ಲಾಧಿಕಾರಿ ಚುನಾವಣಾ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ಜಿ.ಪಂ ಮತ್ತು ತಾ.ಪಂ ಚುನಾವಣೆಯ ತಯಾರಿ ಸಂಬಂಧ ಸೆಕ್ಟರ್ ಅಧಿಕಾರಿಗಳು, ಸಂಚಾರಿ ತಂಡ, ಲೆಕ್ಕಪತ್ರ ಸಿಬ್ಬಂದಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿಚುನಾವಣೆಯ ಸಂದರ್ಭದಲ್ಲಿಯೂ ಕೇರಳ ರಾಜ್ಯದಿಂದ ಬಂದವರು ನಕಲಿ ಮತ ಚಲಾವಣೆ ಮಾಡುತ್ತಾರೆ ಎಂಬ ಆಪಾದನೆ ಕೇಳಿಬರುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗದಲ್ಲಿರುವ ಚುನಾವಣಾ ಸಿಬ್ಬಂದಿಗಳು ಹೆಚ್ಚಿನ ಗಮನ ವಹಿಸಬೇಕು . ಚುನಾವಣಾ ಸಿಬ್ಬಂದಿಗಳ ಬಗ್ಗೆ ಋಣಾತ್ಮಕ ದೂರುಗಳು ಬಾರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಚುನಾವಣಾ ಸಿಬ್ಬಂದಿಗಳು ಸೌಮ್ಯತೆ , ಸೌಜನ್ಯದಿಂದ ವರ್ತಿಸಬೇಕು. ಜಿಲ್ಲೆಯಲ್ಲಿ ಮರುಮತದಾನ ನಡೆಯುವಂತಹ ಪರಿಸ್ಥಿತಿ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಮಾರ್ ಚುನಾವಣಾ ಸಂಬಂಧಪಟ್ಟು ರಾಜಕೀಯ ಪಕ್ಷಗಳಿಂದ ಹಾಕಲಾಗಿರುವ ಬ್ಯಾನರ್, ಪೋಸ್ಟರ್‌ಗಳನ್ನು ತಕ್ಷಣವೆ ತೆರವುಗೊಳಿಸಬೇಕು. ಯಾವುದೆ ಧಾರ್ಮಿಕ ಕೇಂದ್ರದ 100 ಮಿಟರ್ ಸುತ್ತದಲ್ಲಿ ಯಾವುದೆ ರಾಜಕೀಯ ಪಕ್ಷವು ಸಭೆ ನಡೆಸದಂತೆ ಎಚ್ಚರಿಕೆ ವಹಿಸಬೇಕು. ಚುನಾವಣಾ ಸಭೆಗಳನ್ನು ಚಿತ್ರೀಕರಿಸಿಕೊಳ್ಳಬೇಕು ಎಂದು ಸೂಚಿಸಿದರು. ಚುನಾವಣೆಯ ದಿನಂದು ಮತಗಟ್ಟೆಯ 200 ಮಿಟರ್ ದೂರದಲ್ಲಿ ರಾಜಕೀಯ ಪಕ್ಷಗಳಿಗೆ ಸ್ಥಳೀಯ ಗ್ರಾಮಪಂಚಾಯತ್ ನಿಂದ ಅನುಮತಿ ಪಡೆದು ತಾತ್ಕಲಿಕ ಬೂತ್ ನಿರ್ಮಿಸಲು ಅವಕಾಶವಿದೆ. ಮತದಾರರಲ್ಲಿ ಎಫಿಕ್ ಕಾರ್ಡ್ ಇರದಿದ್ದರೆ ಚುನಾವಣಾ ಆಯೋಗ ಗುರುತಿಸಿದ ಇತರ 22 ಗುರುತನ್ನು ತೋರಿಸಿ ಮತಚಲಾಯಿಸಲು ಅವಕಾಶವಿದ್ದು ಅದರ ಬಗ್ಗೆ ತಿಳಿದುಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ , ತಾ.ಪಂ ಚುನಾವಣಾ ವೀಕ್ಷಕ ಬಸವರಾಜೇಂದ್ರ, ವೆಚ್ಚ ವೀಕ್ಷಕ ಬಿ.ಎಚ್. ಹಿರಿಯಣ್ಣ , ನೋಡಲ್ ಅಧಿಕಾರಿ ಪ್ರಮಿಳಾ ಉಪಸ್ಥಿತರಿದ್ದರು.
ಚುನಾವಣಾ ಬಹಿಷ್ಕಾರದ ಬ್ಯಾನರ್ ತೆರವುಗೊಳಿಸಿ: ಜಿಲ್ಲಾಧಿಕಾರಿ
ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕುವ ಮೂಲಕ ಕೆಲವೆಡೆ ಬ್ಲಾಕ್‌ಮೇಲ್ ತಂತ್ರವನ್ನು ಅನುಸರಿಸಲಾಗುತ್ತಿದೆ. ಮತದಾನ ಚಲಾಯಿಸುವುದು ಎಲ್ಲರ ಮೂಲಭೂತ ಹಕ್ಕು, ಯಾರೂ ಮತವನ್ನು ಬಹಿಷ್ಕರಿಸುವಂತಹ ಪರಿಸ್ಥಿತಿ ಬರಬಾರದು. ಚುನಾವಣಾ ಬಹಿಷ್ಕಾರದ ಬ್ಯಾನರ್‌ಗಳು ಇದ್ದರೆ ಅದನ್ನು ತಕ್ಷಣವೆ ತೆಗೆದುಬಿಡಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬಾ್ರಹೀಂ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.