ಮಂಗಳೂರು: ಮರ್‌ಹೂಂ ಸಿ. ಅಬ್ದುಲ್ ಹಮೀದ್ ಸಾಹೇಬರ 22 ನೇ ವಾರ್ಷಿಕ ಅನುಸ್ಮರಣಾ ಕಾರ್ಯಕ್ರಮ
ಮಂಗಳೂರು,ಫೆ.11: ಶ್ರೀಮಂತ ಕುಟುಂಬದಲ್ಲಿ ಜನಿಸಿ , ನೇರ ನಡೆ ನುಡಿಯ ಮೂಲಕ ಬಡವರೊಂದಿಗೆ ತಮ್ಮ ಜೀವನವನ್ನು ವ್ಯಯಿಸಿ ಆಡಂಬರದ ಜೀವನವನ್ನು ಬಯಸದೆ ಸಾಮಾನ್ಯರಂತೆ ಬದುಕು ಕಂಡ ಅಪರೂಪದ ರಾಜಕಾರಣಿಗಳಲ್ಲಿ ಮರ್‌ಹೂಂ ಸಿ.ಅಬ್ದುಲ್ ಹಮೀದ್ ಸಾಹೇಬರ ಆದರ್ಶ ಗುಣ ಇಂದಿಗೂ ತಮ್ಮೆಲ್ಲರಿಗೂ ಅನುಕರಣೀಯ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ , ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಅಧ್ಯಕ್ಷ ಅಲ್ ಹಾಜ್ ಕೆ.ಎಸ್.ಮಹಮ್ಮದ್ ಮಸೂದ್ ಹೇಳಿದರು.
ಅವರು ಇತ್ತೀಚೆಗೆ ದ.ಕ ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಆಯೋಜಿಸಿದ ಮರ್‌ಹೂಂ ಸಿ. ಅಬ್ದುಲ್ ಹಮೀದ್ ಸಾಹೇಬರ 22 ನೇ ವಾರ್ಷಿಕ ಅನುಸ್ಮರಣಾ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಸ್ಲಿಂ ಸಮಾಜದಲ್ಲಿ ಹಮೀದ್ ಸಾಹೇಬರು ಅಪಾರ ಕೊಡುಗೆಗಳನ್ನು ನೀಡಿದರೂ ಇದರ ಸದುಪಯೋಗ ಪಡೆದ ಎಲ್ಲಾ ಧರ್ಮದವರಿಂದಲೂ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಇತರ ರಾಜಕೀಯ ಪಕ್ಷಗಳನ್ನು ಎಂದೂ ಕೀಳಾಗು ಕಾಣಲಿಲ್ಲ. ಅವರ ಸಮನ್ವಯ ನೀತಿಯಿಂದ ಕೇಂದ್ರ ಸರಕಾರದ ರಾಷ್ಟ್ರೀಯ ಭಾವೈಕ್ಯ ಮಂಡಳಿಯ ಅಪರೂಪ ಸದಸ್ಯರುಗಳಲ್ಲಿ ಹಮೀದ್ ಸಾಹೇಬರು ಒಬ್ಬರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಸಿ.ಅಹ್ಮದ್ ಜಮಾಲ್, ಸುರತ್ಕಲ್ ವಲಯ ಮುಸ್ಲಿಂ ಲೀಗ್ ಸಂಚಾಲಕ ಹಾಜಿ ಎಂ ಅಬ್ದುಲ್ ಅಝೀಝ್, ಬೆಂಗರೆ ವಲಯ ಅಧ್ಯಕ್ಷ ಎಂ.ಕೆ.ಅಶ್ರಫ್, ಮುಸ್ಲಿಂ ಲೀಗ್ ಜಿಲ್ಲಾ ಪ್ರ.ಕಾರ್ಯದರ್ಶಿ ಎಂ.ಬಶೀರ್ ಉಳ್ಳಾಲ್, ಉಳ್ಳಾಲ ಕ್ಷೇತ್ರ ಕಾರ್ಯದರ್ಶಿ ರಿಯಾಝ್ ಹರೇಕಳ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ಸ್ವಾಗತಿಸಿದರು. ಬೆಂಗರೆ ವಲಯ ಕಾರ್ಯದರ್ಶಿ ಹಾಜಿ ಎಂ ಇಬ್ರಾಹೀಂ ವಂದಿಸಿದರು.