×
Ad

ಮಾವೊವಾದಿ ಕಿಶನ್ ಹತ್ಯೆಯ ಹಿಂದೆ ಮಮತಾ ಪ್ಲಾನ್ ಟಿಎಂಸಿ ಸಚಿವನಿಂದಲೇ ಬಹಿರಂಗ

Update: 2016-02-11 20:53 IST

ಕೋಲ್ಕತಾ,ಫೆ.11: ಮಾವೊವಾದಿ ನಾಯಕ ಕಿಶನ್‌ಜಿಯ ಹತ್ಯೆಯನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಪೂರ್ವಯೋಜಿತವಾಗಿ ನಡೆಸಿದ್ದಾರೆಂದು, ಅವರ ಸಂಪುಟದ ಸಚಿವರೊಬ್ಬರು ತಿಳಿಸಿದ್ದು, ಹೊಸ ವಿವಾದಕ್ಕೆ ನಾಂದಿಹಾಡಿದ್ದಾರೆ. ಮಮತಾ ಅವರ ಸೋದರಳಿಯ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡಾ ಆರು ತಿಂಗಳ ಹಿಂದೆ, ಇದೇ ವಿಷಯವನ್ನು ಬಹಿರಂಗಪಡಿಸಿದ್ದರು.
   ಪಶ್ಚಿಮಬಂಗಾಳದ ಯೋಜನಾ ಸಚಿವ ರಚ್‌ಪಾಲ್‌ಸಿಂಗ್ ಬುಧವಾರ ಹೂಗ್ಲಿಯ ಬಾಲಘರ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡುತ್ತಾ, ‘‘ಟಿವಿ ಹಾಗೂ ಸುದ್ದಿಪತ್ರಿಕೆ ವರದಿಗಾರರು, ಕಿಶನ್‌ಜಿ ಕುರಿತು ಸದಾ ಮಾತನಾಡುತ್ತಿದ್ದರು. ಆತ ಕಾಣಲು ಸಿಗುತ್ತಿದ್ದರೂ, ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದಾಗ, ಅವರಿಗೆ ಕಿಶನ್‌ಜಿಯ ಬಂಧನ ಕೇವಲ ಪೊಲೀಸರಿಂದಲೇ ಸಾಧ್ಯವಾಗದು ಎಂಬುದನ್ನು ಅರಿತರು. ಹೀಗಾಗಿ ಆಕೆ ತಾನಾಗಿಯೇ ಕಿಶನ್‌ಜಿ ಬಗೆಗಿನ ಮಾಹಿತಿ ಕಲೆಹಾಕಿದರು, ಕೇವಲ ಮೂರು ತಿಂಗಳುಗಳಲ್ಲಿ ಆತ ಏನ್‌ಕೌಂಟರ್‌ನಲ್ಲಿ ಹತ್ಯೆಯಾಗುವಂತೆ ಮಾಡಿದರು ’’ಎಂದು ಹೇಳಿದ್ದಾರೆ.
 ಸಚಿವರ ಹೇಳಿಕೆಯು ತೃಣಮೂಲ ಹಾಗೂ ಪ.ಬಂಗಾಳ ಸರಕಾರಕ್ಕೆ ದೊಡ್ಡ ಮುಜುಗರವುಂಟು ಮಾಡಿದೆ. ಜಂಟಿ ಪಡೆಗಳ ನಡೆಸಿದ ಎನ್‌ಕೌಂಟರ್‌ನಲ್ಲಿ ಕಿಶನ್‌ಜಿ ಬಲಿಯಾದನೆಂದು ಮಮತಾ ಸರಕಾರ ಈತನಕ ಹೇಳುತ್ತಲೇ ಬಂದಿತ್ತು. ಆದರೆ ಈಗ ರಚ್‌ಪಾಲ್‌ಸಿಂಗ್ ಅವರ ಹೇಳಿಕೆಯು, ಕಿಶನ್‌ಜಿಯನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿದೆಯೆಂಬ ಸಂದೇಹವನ್ನು ಪುಷ್ಟೀಕರಿಸಿದೆ.
ಮಾವೊವಾದಿ ಕಮ್ಯುನಿಸ್ಟ್ ಪಕ್ಷದ ನಾಯಕನಾದ ಕಿಶನ್‌ಜಿಯನ್ನು 2011ರ ನವೆಂಬರ್ 24ರಂದು ಪಶ್ಚಿಮ ಮಿಡ್ನಾಪುರದ ಬುರಿಸೊಲ್ ಅರಣ್ಯಪ್ರದೇಶದಲ್ಲಿ, ಜಂಟಿ ಪಡೆಗಳ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News