×
Ad

ಮಂಗಳೂರು : 0-5 ವರ್ಷದ ಮಕ್ಕಳ ಸಮಗ್ರ ಸಮೀಕ್ಷೆ: ಡಿಸಿ ಸೂಚನೆ

Update: 2016-02-11 21:43 IST

ಮಂಗಳೂರು, ಫೆಬ್ರವರಿ 11 : ಪಲ್ಸ್ ಪೋಲಿಯೋ ಲಸಿಕೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 5 ವರ್ಷದೊಳಗಿನ ಎಲ್ಲಾ ಮಕ್ಕಳ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.

    ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಫೆಬ್ರವರಿ 21ರಂದು ನಡೆಯಲಿರುವ ಎರಡನೇ ಹಂತದ ಕಾರ್ಯಕ್ರಮದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಪೋಲಿಯೋ ಹನಿಯನ್ನು ನಿಖರವಾಗಿ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಮಕ್ಕಳ ನಿಖರ ಅಂಕಿಸಂಖ್ಯೆ ಇರಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ನಾಳೆಯಿಂದಲೇ ಆರಂಭವಾಗುವಂತೆ ಜಂಟೀ ಸಮೀಕ್ಷೆ ನಡೆಸಿ, ಮಕ್ಕಳ ನಿಖರ ಮಾಹಿತಿ ಪಡೆಯುವಂತೆ ಅವರು ತಿಳಿಸಿದರು.

 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಜಿಲ್ಲೆಯ ಪ್ರತೀ ಮನೆಮನೆಗೂ ತೆರಳಿ ಮಕ್ಕಳ ಗಣತಿ ಮಾಡಬೇಕು. ಮುಂದಿನ 7 ದಿನಗಳಲ್ಲಿ ಈ ಕಾರ್ಯ ಮುಗಿಯಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಈ ಸಂಖ್ಯೆಯಿಂದ ಜಿಲ್ಲೆಯಲ್ಲಿ ಪೊಲಿಯೋ ಹನಿ ನೀಡುವ ಗುರಿಯನ್ನು ನಿಗದಿಪಡಿಸಬಹುದಾಗಿದೆ ಎಂದು ಹೇಳಿದರು.

 ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

  ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸಿಕಂದರ್ ಪಾಶಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News