×
Ad

ಚುಟುಕು ಸುದ್ದಿಗಳು

Update: 2016-02-11 23:18 IST


ಇಂದು ಚಲನಚಿತ್ರ ಬಿಡುಗಡೆ
 ಮಂಗಳೂರು,ಫೆ.11: ಯೋಧ ಮೋಷನ್ ಪಿಕ್ಚರ್ಸ್‌ ಲಾಂಛನದಲ್ಲಿ ಸೂರ್ಯ ಮೆನನ್ ನಿರ್ದೇಶಿಸಿದ ರಂಜನ್ ಶೆಟ್ಟಿ, ಸೂರ್ಯ ಮೆನನ್ ನಿರ್ಮಿಸಿದ ‘ಕುಡ್ಲ ಕೆಫೆ’ ತುಳು ಚಲನಚಿತ್ರವು ಫೆ.12ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ತೆರೆಕಾಣಲಿದೆ ಎಂದು ನಟ ನವೀನ್ ಡಿ. ಪಡೀಲ್ ತಿಳಿಸಿದ್ದಾರೆ.
ಮಂಗಳೂರು ಸುತ್ತಮುತ್ತ ನಿರ್ಮಿಸಿದ ಈ ಚಿತ್ರದಲ್ಲಿ ಮೂರು ಹಾಡುಗಳಿವೆ. ಪ್ರಥಮ ಬಾರಿಗೆ ಕಬಡ್ಡಿ ಕ್ರೀಡೆಯ ಕುರಿತು ಕಥೆಯನ್ನು ಅಳವಡಿಸಲಾಗಿದೆ. ಈ ಸಿನೆಮಾದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಕಬಡ್ಡಿ ಆಟಗಾರರು ಅಭಿನಯಿಸಿರುವುದು ವಿಶೇಷವಾಗಿದೆ ಎಂದರು.

ಇಂದು ಐಟಿ ಫೆಸ್ಟ್
ಪುತ್ತೂರು, ಫೆ.11: ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗವು ಐಟಿ ಕ್ಲಬ್ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಪರಿಶೀಲನಾ ಘಟಕದ (ಐಕ್ಯೂಎಸಿ) ಸಹಯೋಗದೊಂದಿಗೆ ಪ್ರತಿ ವರ್ಷ ನಡೆಸುವ ಐಟಿ ಫೆಸ್ಟ್ ಟೆಕ್ನೊತರಂಗ್ ಫೆ.12ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಏಳು ಸ್ಪರ್ಧೆಗಳನ್ನು ಆಯೋಜಿಸಲಾದ್ದು, ಸುಮಾರು 20 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


ಇಂದು ‘ಪ್ರವಾದಿ ಸಂದೇಶ’ ಕಾರ್ಯಕ್ರಮ
ಮಂಗಳೂರು, ಫೆ.11: ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಪ್ರವಾದಿ (ಸ)ರ ಸಂದೇಶ ಪ್ರಚಾರ ಅಭಿಯಾನದ ಸಾರ್ವಜನಿಕ ಕಾರ್ಯಕ್ರಮವು ಫೆ.12ರಂದು ಸಂಜೆ 7ಕ್ಕೆ ಉಳ್ಳಾಲದ ಅಬ್ಬಕ್ಕ ಸರ್ಕಲ್‌ನಲ್ಲಿ ಜರಗಲಿದೆ. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ಪ್ರವಾದಿ ಮುಹಮ್ಮದ್ (ಸ)ರ ಮಾದರಿ ಮದೀನ’ ಎಂಬ ವಿಷಯದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಉಳ್ಳಾಲ: ಪದಾಧಿಕಾರಿಗಳ ಅಯ್ಕೆ
ಉಳ್ಳಾಲ, ಫೆ.11: ಎಸ್ಸೆಸ್ಸೆಫ್ ಟಿಪ್ಪುಸುಲ್ತಾನ್ ಕ್ಯಾಂಪಸ್ ವಾರ್ಷಿಕ ಸಭೆಯು ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಮದ್ ಅಹ್ಸನಿ ಅಧ್ಯಕ್ಷತೆಯಲ್ಲಿ ಸೈಯದ್ ಮದನಿ ಮಸೀದಿ ವಠಾರ ಟಿಪ್ಪುಕ್ಯಾಂಪಸಲ್ಲಿ ನಡೆಯಿತು.
ಗೌರವಾಧ್ಯಕ್ಷರರಾಗಿ ಅಬ್ದುಸ್ಸಮದ್ ಅಹ್ಸನಿ, ಅಧ್ಯಕ್ಷರಾಗಿ ಹಫೀಝ್ ಉಳ್ಳಾಲ್, ಉಪಾಧ್ಯಕ್ಷರಾಗಿ ಮುಸ್ತಫಾ ಕೆ.ಸಿ. ರೋಡ್ ಮತ್ತು ರಾಫಿ ಮದನಿ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಖಾದರ್ ಪೊಯ್ಯತ್ತಬೈಲ್, ಜೊತೆ ಕರ್ಯಾದರ್ಶಿಯಾಗಿ ನಾಸಿರ್ ಸಜಿಪ, ಜೊತೆ ಕಾರ್ಯದರ್ಶಿಯಾಗಿ ಹಾಶಿಮ್ ಕೆಮ್ಮಾರ, ಕೋಶಾಧಿಕಾರಿಯಾಗಿ ಎಂ.ಎಂ. ಮುಹ್‌ರೂಫ್ ಆತೂರು, ಸಂಚಾಲಕರಾಗಿ ನೌಶಾದ್ ಎಚ್.ಕಲ್ಲು ಹಾಗೂ 10 ಮಂದಿ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.


ನಾಳೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ
ಉಡುಪಿ, ಫೆ.11: ಪಿತ್ರೋಡಿಯ ಬಾಲ ಪ್ರತಿಭೆ ಬೇಬಿ ತನುಶ್ರೀ ಅವರ 200ನೆ ನೃತ್ಯ ಪ್ರದರ್ಶನ ಪ್ರಯುಕ್ತ ಕ್ರಿಯೇಟಿವ್ ಟ್ಯಾಲೆಂಟ್ ಹಂಟರ್ಸ್‌ ಗ್ರೂಪ್ ವತಿಯಿಂದ ರಾಜ್ಯಮಟ್ಟದ ಸಮೂಹ ನೃತ್ಯ ಸ್ಪರ್ಧೆಯನ್ನು ಫೆ.13ರಂದು ಸಂಜೆ 7ಗಂಟೆಗೆ ಪಿತ್ರೋಡಿ ಸೊಸೈಟಿ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಕ ಉದಯ ಕುಮಾರ್ ಹೇಳಿದ್ದಾರೆ
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸ್ಪರ್ಧೆಯಲ್ಲಿ ರಾಜ್ಯದ ಆಹ್ವಾನಿತ 10 ತಂಡಗಳು ಭಾಗವಹಿಸಲಿದ್ದು, ವಿಜೇತರಿಗೆ ಪ್ರಥಮ 20ಸಾವಿರ ರೂ., ದ್ವಿತೀಯ 15ಸಾವಿರ ರೂ. ಹಾಗೂ ಶಾಶ್ವತ ಫಲಕ ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ತುಳುಚಿತ್ರ ನಟ ಸಂದೀಪ್ ಶೆಟ್ಟಿ, ನಾಗರಾಜ್ ಭಾಗವಹಿಸಲಿರುವರು.


ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
ಉಡುಪಿ, ಫೆ.11: ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಹಾಲ್ಕಲ್ (ಜಡ್ಕಲ್ ಗ್ರಾಮ) ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ ತಟುವಟ್ಟು (ಹಾಲಾಡಿ-76) ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಖಾಲಿ ಇದ್ದು 18ರಿಂದ 35 ವರ್ಷದೊಳಗಿನ ಅದೇ ಗ್ರಾಮದ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗರಿಷ್ಠ ಎಸೆಸೆಲ್ಸಿ ತೇರ್ಗಡೆಗೊಂಡ ಅಭ್ಯರ್ಥಿಗಳು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ, ಕನಿಷ್ಠ 4ನೆ ತರಗತಿ ಹಾಗೂ ಗರಿಷ್ಠ 9ನೆ ತರಗತಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಾ.3 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಲೋಕೋಪಯೋಗಿ ಕಚೇರಿ ಹಿಂದುಗಡೆ, ಕೆಇಬಿ ಕಚೇರಿ ಬಳಿ, ಎನ್.ಎಚ್.-66, ಕುಂದಾಪುರ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.


ಫೆ.14: ಧಾರ್ಮಿಕ ಪ್ರವಚನ
ಹೈದರಾಬಾದ್, ಫೆ.11: ಸಫಾ ಬೈತುಲ್ಮಾಲ್ ಎಜುಕೇಶನಲ್ ವೆಲ್ಫೇರ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹೈದರಾಬಾದ್‌ನ ಕರೀಮ್ ನಗರ್ ಎಂಬಲ್ಲಿ ಧಾರ್ಮಿಕ ಕಾರ್ಯಕ್ರಮವು ಫೆ.14ರಂದು ನಡೆಯಲಿದ್ದು, ಮೌಲಾನಾ ಗಯಾಸುದ್ದೀನ್ ಅಹ್ಮದ್ ರಶಾದಿ ಅಧ್ಯಕ್ಷತೆ ವಹಿಸಲಿರುವರು.
ಮೌಲಾನಾ ಮುಹಮ್ಮದ್ ಹನೀಫ್ ಅಫ್ಸರ್ ಅಝೀಝಿ ಹಾಗೂ ಮೌಲಾನಾ ಮುಹಮ್ಮದ್ ಅತೀಕುರ್ರಹ್ಮಾನ್ ಅರ್ಶದ್ ರಶಾದಿ ಪ್ರವಚನವನ್ನು ನೀಡಲಿರುವರು ಎಂದು ಪ್ರಕಟನೆ ತಿಳಿಸಿದೆ.


ಫೆ.18ರಿಂದ ಮಾಧ್ಯಮ ಹಬ್ಬ
  ಉಡುಪಿ, ಫೆ.11: ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ವಾರ್ಷಿಕ ಮೇಳ ‘ಆರ್ಟಿಕಲ್ 19’ ಫೆ.18ರಿಂದ 20ರವರೆಗೆ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಸ್ಪರ್ಧೆಗಳೊಂದಿಗೆ ಮಾಧ್ಯಮ ಹಬ್ಬ ನಡೆಯಲಿದೆ ಎಂದು ಎಸ್‌ಒಸಿ ಪ್ರಭಾರ ನಿರ್ದೇಶಕಿ ಡಾ.ಪದ್ಮಾರಾಣಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮೂರು ದಿನಗಳ ಉತ್ಸವದಲ್ಲಿ ಮಾಧ್ಯಮ ರಂಗದ ಖ್ಯಾತನಾಮರಿಂದ ಮುದ್ರಣ, ಟಿವಿ ಹಾಗೂ ಸಿನೆಮಾ ರಂಗದ ಕುರಿತು ಹಲವು ಉಪನ್ಯಾಸ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದೇಶದ ಪ್ರಮುಖ ವಿದ್ಯಾಸಂಸ್ಥೆಯಾದ ಎಸ್‌ಒಸಿ, 2002ರಿಂದ ಆರ್ಟಿಕಲ್ 19 ಮಾಧ್ಯಮ ಮೇಳವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈ ಬಾರಿ ಈ ಮೇಳದಲ್ಲಿ ಮಾಧ್ಯಮರಂಗದ ಪ್ರಮುಖರಾದ ಜಾಹೀರಾತು ಸಿನೆಮಾ ನಿರ್ದೇಶಕ ಪ್ರಹ್ಲಾದ್ ಕಕ್ಕರ್, ತೆಹಲ್ಕಾ ಹಾಗೂ ಎನ್‌ಡಿಟಿವಿಗಳ ವರದಿಗಾರರಾಗಿದ್ದ ನಿತಿನ್ ಗೋಖಲೆ, ಫೆಮಿನಾದ ಮಾಜಿ ಸಂಪಾದಕಿ ಸತ್ಯ ಸರಿನ್, ಈಗ ಶಿಲ್ಲಾಂಗ್ ಟೈಮ್ಸ್‌ನ ಸಂಪಾದಕರಾಗಿರುವ ಪ್ಯಾಟ್ರಿಸಿಯಾ ಮುಖಿಮ್ ಭಾಗವಹಿಸಲಿದ್ದಾರೆ ಎಂದು ಡಾ. ಪದ್ಮಾರಾಣಿ ತಿಳಿಸಿದರು.


ಧರಣಿ ನಿರತರ ಬಂಧನ: ಸಿಎಫ್‌ಐ ಖಂಡನೆ
ಬಂಟ್ವಾಳ, ಫೆ. 11: ದೇಶದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಹಾಗೂ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸಿ ಬೆಂಗಳೂರಿನ ರಾಜ ಭವನದ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನಾಯಕರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಬಂಟ್ವಾಳ ತಾಲೂಕು ಅಧ್ಯಕ್ಷ ಅಶ್ವನ್ ಸಾದಿಕ್ ತೀವ್ರವಾಗಿ ಖಂಡಿಸಿದ್ದಾರೆ. ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದವರನ್ನು ಬಂಧಿಸಿರುವ ಕ್ರಮ ಸಂವಿಧಾನ ನೀಡಿದ ಹಕ್ಕಿನ ದಮನವಾಗಿದೆ ಎಂದು ಆರೋಪಿಸಿರುವ ಅವರು, ನಾಯಕರ ಬಂಧನದ ವಿರುದ್ಧ ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಮಂಜೇಶ್ವರ:ಪಿಂಚಣಿ ಚೆಕ್ ವಿತರಣೆ
ಕುಂಜತ್ತೂರು, ಫೆ.11: ಮಂಜೇಶ್ವರ ಗ್ರಾಪಂನ ವಿವಿಧ ಸಾಮೂಹಿಕ ಸುರಕ್ಷಾ ಪೆನ್ಸನ್ ಚೆಕ್‌ಗಳನ್ನು ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಅಝೀಝ್ ಹಾಜಿ ಸಭೆ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದರು.ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಮುಕ್ತಾರ್, ಸದಸ್ಯರಾದ ಅಬ್ದುರ್ರಹ್ಮಾನ್ ಹಾಜಿ ಕೆಎಂಕೆ, ಫೈಝಲ್ ಪುಚ್ಚಂಪ್ಪಾಡಿ, ಝಹುರಾ, ಶಮ್ಸೀನಾ, ಝಿಯಾನಾ ಮತ್ತಿತರರು ಉಪಸ್ಥಿತರಿದ್ದರು. 


ಐಸಿಸ್ ಇಸ್ಲಾಮಿ ವಿರೋಧಿ: ಮುಸ್ತಫಲ್ ಖಾದ್ರಿ
ಮಂಗಳೂರು, ಫೆ.11: ಇಸ್ಲಾಂ ಶಾಂತಿ ಸೌಹಾರ್ದತೆಯ ಧರ್ಮ. ಇಸ್ಲಾಮಿನಲ್ಲಿ ಕೋಮುವಾದ, ಉಗ್ರವಾದ, ಭಯೋತ್ಪಾದನೆಗಳಿಗೆ ಸ್ಥಾನವಿಲ್ಲ. ಇಸ್ಲಾಮಿನ ವಿರುದ್ಧ ಬಹಳಷ್ಟು ಹುನ್ನಾರಗಳು ನಡೆಯುತ್ತಿವೆೆ. ಐಸಿಸ್ ಎಂಬ ಸಂಘಟನೆಯು ಇಸ್ಲಾಮಿನ ವಿರೋಧಿಗಳಿಂದ ಹುಟ್ಟಿಕೊಂಡು ಜಗತ್ತಿನಾದ್ಯಂತ ಇಸ್ಲಾಮಿನ ವಿರುದ್ಧ ಅಪಪ್ರಚಾರ ಉಂಟು ಮಾಡಿಸುತ್ತಿದೆ ಎಂದು ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾದ ರಾಷ್ಟಾಧ್ಯಕ್ಷ ಜಾಮಿಅಃ ಅಮ್ಜದಿಯ್ಯಃ ರಝ್ವಿಯ್ಯಃದ ಪ್ರಾಂಶುಪಾಲ ಮುಹದ್ದಿಸೇ ಕಬೀರ್ ಅಲ್ಲಾಮ ಝಿಯಾವುಲ್ ಮುಸ್ತಫಲ್ ಖಾದ್ರಿ ನುಡಿದರು.
ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಶನ್ ಕೋಟೆಬಾಗಿಲು ಸುನ್ನಿ ದಾರುಲ್ ಉಲೂಂ ಮುಹಮ್ಮದಿಯ್ಯ ಅರಬಿಕ್ ಕಾಲೇಜಿನಲ್ಲಿ ನಡೆಸಿದ ‘ತಾಜ್ದಾರೇ ಅಹ್ಲುಸುನ್ನತ್ ಅಹ್ಮದ್ ಕೋಯ ಶಾಲಿಯಾತಿ ಅವಾರ್ಡ್’ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಸಂಸ್ಥೆಯ ಪ್ರಾಂಶುಪಾಲ ಮುಫ್ತಿ ಬದ್ರುದ್ದೀನ್‌ಮಿಸ್ಬಾಹಿ ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ಇಸ್ಮಾಯೀಲ್ ವಸ್ತಿ ಬಾರಬಂಕಿ ಮುಖ್ಯ ಭಾಷಣಗೈದರು. ಯೂಸುಫ್ ರಝಾ ಅಮ್ಜದಿ, ಹಾಫಿಳ್ ಸುಫಿಯಾನ್ ಸಖಾಫಿ ಪ್ರಾಸ್ತಾವಿಕ ಭಾಷಣಗೈದರು. ಕುರ್‌ಆನ್ ಕಂಠಪಾಠ ಸ್ಪರ್ಧೆ, ನಅತ್ ಶರೀಫ್ ಸ್ಪರ್ಧೆ,ಖತ್ಮುಲ್ ಬುಖಾರಿ ನಡೆಯಿತು.ಕಾವಳಕಟ್ಟೆ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ, ಅಶ್ರಫ್ ರಝಾ ಅಮ್ಜದಿ ಪಕ್ಷಿಕೆರೆ, ಉಸ್ಮಾನ್ ಅಮ್ಜದಿ ಚಾಲಿಯಂ ಮಲಪ್ಪುರಂ,ಮುಸ್ತಫಾ ಅಮ್ಜದಿ ಕಾಸರಗೋಡ್ ಉಪಸ್ಥಿತರಿದ್ದರು.

‘ವಿದ್ಯಾರ್ಥಿ ವೇತನ ನೀಡದೆ ಅನ್ಯಾಯ’
 ಉಡುಪಿ, ಫೆ.11: ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿಯ ಸಾವಿರಾರು ವಿದ್ಯಾರ್ಥಿಗಳಿಗೆ 2013-14, 2014-15 ಹಾಗೂ 2015-16ನೆ ಸಾಲಿನ ವಿದ್ಯಾರ್ಥಿವೇತನ ನೀಡದೇ ಅನ್ಯಾಯವೆಸಗಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದು ಕೋಟಿ ರೂ.ಗಳಿಗೂ ಅಧಿಕ ವಿದ್ಯಾರ್ಥಿ ವೇತನ ಸಿಗದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ರಾಜ್ಯದಲ್ಲಿ ಸುಮಾರು 75 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಬಾಕಿ ಇರುವ ಮಾಹಿತಿ ಇದೆ ಎಂದಿರುವ ಅವರು, ಶೀಘ್ರ ವಿದ್ಯಾರ್ಥಿ ವೇತನವನ್ನು ಪಾವತಿಸದಿದ್ದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸುಂದರ್ ಮಾಸ್ತರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಹಿಳಾ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಾಗಾರ
  ಬೆಳ್ತಂಗಡಿ, ಫೆ.11: ಕಪುಚಿನ್ ಕೃಷಿಕ ಸೇವಾ ಕೇಂದ್ರ ದಯಾಳ್‌ಬಾಗ್, ವಿಮುಕ್ತಿ ವತಿಯಿಂದ ಟಿ.ಡಿ.ಎಸ್.ಎಸ್ ಸಹಯೋಗದೊಂದಿಗೆ ಮಹಿಳಾ ದೌರ್ಜನ್ಯ ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಉಜಿರೆಯಲ್ಲಿ ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ನಿರ್ದೇಶಕ ವ. ಫಾ. ವಿನೋದ್ ಮಸ್ಕರೇನ್ಹಸ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ತಮ್ಮದೇ ಆದ ವ್ಯವಸ್ಥೆ ಇದೆ. ಇದನ್ನು ಸರಿಯಾಗಿ ಅರಿತು ಅನ್ಯಾಯವಾದಾಗ, ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬಂದು ಸರಿ, ತಪ್ಪು ಬಗ್ಗೆ ಮಾತಾಡಬೇಕು. ಮಹಿಳೆಯರು ದೌರ್ಜನ್ಯ ವಿರುದ್ಧ ಧ್ವನಿ ಎತ್ತುವಲ್ಲಿ ಹಿಂಜರಿಯಬಾರದು. ಮಹಿಳೆಯರು ತಮ್ಮ ಒಳ್ಳೆಯ ಅಲೋಚನೆ ಹಾಗೂ ದೃಢವಾದ ಆತ್ಮವಿಶ್ವಾಸದೊಂದಿಗೆ ಯಶಸ್ಸು ಸಾಧಿಸಬಹುದು ಎಂದರು. ಕಾರ್ಯಾಗಾರದಲ್ಲಿ ಒಟ್ಟು 55 ಸದಸ್ಯರು ಭಾಗವಹಿಸಿದ್ದರು. ಅಕ್ಷಿತಾ ಸ್ವಾಗತಿಸಿ, ಭಾರತಿ ವಂದಿಸಿದರು. ಸಂಸ್ಥೆಯ ಲೆಕ್ಕ ಪರಿಶೋಧಕ ಮೌರೀಸ್, ಮೇಲ್ವಿಚಾರಕ ರೋಹಿಣಿ ಹಾಗೂ ಕಾರ್ಯಕರ್ತೆ ಸುಮಂಗಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News