ಉಡುಪಿ: ದೇವಸ್ಥಾನದ ಬಳಿ ನಾಲ್ಕು ಹೆಬ್ಬಾವು ಪ್ರತ್ಯಕ್ಷ!

Update: 2016-02-12 15:39 GMT

ಉಡುಪಿ, ಫೆ.11: ಇಲ್ಲಿಗೆ ಸಮೀಪದ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಬಳಿ ಗುರುವಾರ ಅಪರಾಹ್ನ ಖಾಸಗಿ ಜಾಗವೊಂದರಲ್ಲಿ ನಾಲ್ಕು ಹೆಬ್ಬಾವುಗಳನ್ನು ಕಂಡು ಪರಿಸರದ ಜನತೆ ದಿಗ್ಭ್ರಮೆಗೊಳಗಾಗಿದ್ದು, ಕೊನೆಗೆ ಉರಗ ತಜ್ಞರು ಬಂದು ಅವುಗಳನ್ನು ಹಿಡಿದು ಜನರ ಆತಂಕವನ್ನು ದೂರ ಮಾಡಿದ್ದಾರೆ. ಪುತ್ತೂರು ಎಲ್‌ವಿಟಿ ದೇವಸ್ಥಾನದ ಬಳಿ ಸುಮಾರು 3.5 ಎಕರೆ ಖಾಸಗಿ ಜಮೀನನ್ನು ಜೆಸಿಬಿ ಮೂಲಕ ಇಂದು ಸಮತಟ್ಟು ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಒಂದು ಹೆಬ್ಬಾವಿಗೆ ಏಟಾಗಿದ್ದು ಅದು ಹೊರ ಬಂದಿದೆ. ಹೆಬ್ಬಾವು ಕಂಡು ಜೆಸಿಬಿ ಚಾಲಕ ಜೆಸಿಬಿಯನ್ನು ನಿಲ್ಲಿಸಿದ್ದಾನೆ. ಏಟು ಬಿದ್ದ ಹೆಬ್ಬಾವು ಪೊದೆಗಳತ್ತ ಓಡಿಹೋಗಿತ್ತು.

 ಇದಾದ ಸ್ವಲ್ಪವೇ ಹೊತ್ತಿಗೆ ಇನ್ನೊಂದು ಹೆಬ್ಬಾವು ಹೊರಬಂದಿದ್ದು, ಇದು ಪೊದೆಗಳ ಮರೆಗೆ ಹೋಗುವಾಗ ಮತ್ತೊಂದು ಹೆಬ್ಬಾವು ಕಂಡಿದೆ. ಇಷ್ಟರಲ್ಲೇ ಭಯಭೀತರಾದ ಸ್ಥಳೀಯರು ಪರಿಸರದ ಖ್ಯಾತ ಉರಗತಜ್ಞ ಗುರುರಾಜ ಸನಿಲ್‌ಗೆ ದೂರವಾಣಿ ಕರೆ ಮಾಡಿದ್ದು, ಗುರುರಾಜ್ ಜನರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿ, ಅವುಗಳು ತಮ್ಮಷ್ಟಕ್ಕೆ ಹೊರಟು ಹೋಗುತ್ತವೆ ಎನ್ನುತಿದ್ದಾಗಲೇ ನಾಲ್ಕನೇ ಹೆಬ್ಬಾವು ಕಾಣಿಸಿಕೊಂಡಿದೆ. ಹೀಗೆ ಒಂದರ ಹಿಂದೆ ಒಂದರಂತೆ ನಾಲ್ಕು ಹೆಬ್ಬಾವುಗಳ ಮೆರವಣಿಗೆಯನ್ನು ಕಂಡು ನೆರೆದಿದ್ದ ಜನ ಆತಂಕಕ್ಕೊಳಗಾಗಿದ್ದಾರೆ. ಸ್ಥಳಕ್ಕೆ ಬರುವಂತೆ ಗುರುರಾಜ್ ಸನಿಲ್‌ಗೆ ಒತ್ತಾಯಿಸಿದ್ದು, ಗುರುರಾಜ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ದೇವರಾಜ ಪಾಣ, ಸಿಬ್ಬಂದಿ ಮತ್ತು ಗುರುರಾಜ್ ಸ್ಥಳಕ್ಕೆ ಆಗಮಿಸಿದರು.
ಸಮತಟ್ಟುಗೊಂಡಿರುವ ಪ್ರದೇಶ ಬಿಟ್ಟು ಪಕ್ಕದ ಪೊದೆಗಳಲ್ಲಿ ಬೇರೆ ಬೇರೆ ಕಡೆ ಅಡಗಿ ಕುಳಿತಿದ್ದ ನಾಲ್ಕು ಹೆಬ್ಬಾವುಗಳನ್ನು ಗುರುರಾಜ್ ಹಿಡಿದಿದ್ದು, ಸ್ಥಳೀಯರಾದ ಅನಿಲ್, ರಾಘವೇಂದ್ರ ಭಟ್, ಪ್ರದೀಪ್, ವಿಜಯ ತೆಂಡೂಲ್ಕರ್, ನಂದ ಪೂಜಾರಿ ಮುಂತಾದವರು ಅವರಿಗೆ ಸಹಕರಿಸಿದರು.
ಹಿಡಿದ ಎಲ್ಲಾ ಹಾವುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News