×
Ad

ಶತಮಾನದ ಮಹೋನ್ನತ ಶೋಧ ತಂಡದಲ್ಲಿ ಭಾರತದ 37 ವಿಜ್ಞಾನಿಗಳು

Update: 2016-02-12 15:02 IST


ಹೊಸದಿಲ್ಲಿ , ಫೆ. 12: ಗುರುತ್ವಾಕರ್ಶಕ ಕಂಪನ ಅಲೆಗಳು ಬರೋಬ್ಬರಿ 10.5 ಶತಕೋಟಿ ವರ್ಷಗಳಿಂದ ಬಾಹ್ಯಾಕಾಶದಲ್ಲಿ ಪ್ರಯಾಣಿಸುತ್ತಿರುವುದನ್ನು ಪತ್ತೆ ಹಚ್ಚಿರುವ ಮಹತ್ವದ ಸಂಶೋಧನೆಯಲ್ಲಿ ಜಾಗತಿಕವಾಗಿ ಸಾವಿರ ತಜ್ಞರು ಭಾಗವಹಿಸಿದ್ದು ಭಾರತದ 37 ವಿಜ್ಞಾನಿಗಳು  ಈ ತಂಡದಲ್ಲಿದ್ದರು. 
ಈ ಮಹತ್ವದ ಸಂಶೋಧನೆ ಬ್ರಹ್ಮಾಂಡದಲ್ಲಿರುವ ಅತ್ಯಂತ ನಿಗೂಢ ವಸ್ತುಗಳ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ. 

ಬಾಹ್ಯಾಕಾಶದಲ್ಲಿ ಪತ್ತೆಯಾಗಿರುವ ಈ ಕಾಂತೀಯ ಅಲೆಗಳು ಐನ್‌ಸ್ಟೀನ್‌ನ ಸಾಪೇಕ್ಷ ಸಿದ್ಧಾಂತವನ್ನು ದೃಢಪಡಿಸಿವೆ. ಎರಡು ಕಪ್ಪು ರಂಧ್ರಗಳು ಪರಸ್ಪರ ಢಿಕ್ಕಿ ಹೊಡೆದಿರುವುದನ್ನು ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ.ಸೂರ್ಯನಿಗಿಂತಲೂ ಹತ್ತು ಪಟ್ಟು ಭಾರವಿರುವ ಈ ಎರಡು ಕಪ್ಪುರಂಧ್ರಗಳು, ಪರಸ್ಪರ ಸುತ್ತುವರಿದು ಭೀಕರವಾಗಿ ಘರ್ಷಿಸಿದಂತಹ ವಿದ್ಯಮಾನವನ್ನು ವೀಕ್ಷಿಸಲು ವಿಜ್ಞಾನಿಗಳಿಗೆ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಬಾಹ್ಯಾಕಾಶದಲ್ಲಿ ಬೆಳಕು ಕೂಡಾ ಹೊರಬರಲು ಸಾಧ್ಯವಿಲ್ಲದಷ್ಟು ಪ್ರಬಲವಾದ ಗುರುತ್ವಾಕರ್ಷಣಶಕ್ತಿಯಿರುವ ಪ್ರದೇಶಗಳನ್ನು ಕಪ್ಪುರಂಧ್ರಗಳೆಂದು ಕರೆಯಲಾಗುತ್ತದೆ.

ಇದೊಂದು ಈ ಶತಮಾನದ ಅತಿ ದೊಡ್ಡ ವೈಜ್ಞಾನಿಕ ಶೋಧವೆಂದು ಹಿರಿಯ ಬ್ರಿಟಿಷ್ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಬಾಹ್ಯಾಕಾಶದಲ್ಲಿ ಗುಪ್ತವಾಗಿರುವ ಪ್ರದೇಶಗ ವೀಕ್ಷಣೆಗೆ ಹೊಸ ದಾರಿಗಳನ್ನು ಹುಡುಕಲು ಈ ಶೋಧ ನೆರವಾಗಲಿದೆಯೆಂದು ಅವರು ಅಭಿಪ್ರಾಯಿಸಿದ್ದಾರೆ.
  ಅಮೆರಿಕದ ಎರಡು ಖಗೋಳ ವೀಕ್ಷಣಾಲಯಗಳ ಅತಿ ಸಂವೇದನಾಕಾರಿ ಉಪಕರಣಗಳು, ಕಪ್ಪು ರಂಧ್ರಗಳ ಘರ್ಷಣೆಯಿಂದ ಉತ್ಪತ್ತಿಯಾದ ಕಂಪನ ಅಲೆಗಳನ್ನು ಪತ್ತೆಹಚ್ಚಿವೆ.
ಗುರುತ್ವಾಕರ್ಷಣ ಹಾಗೂ ಕಾಂತೀಯ ಅಲೆಗಳ ವೀಕ್ಷಣಾಲಯಗಳ ಜಾಲವೊಂದನ್ನು ನಿರ್ಮಿಸಲು ಈ ಶೋಧವು ನೆರವಾಗಲಿದೆ.ಕಪ್ಪು ರಂಧ್ರಗಳು ಹಾಗೂ ಇತರ ಬೃಹತ್ ಆಕಾಶ ಕಾಯಗಳ ನಡುವಿನ ಘರ್ಷಣೆಗಳ ಬಗ್ಗೆ ಅಧ್ಯಯನ ನಡೆಸಲು ಇದರಿಂದ ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ 13.7 ಶತಕೋಟಿ ವರ್ಷಗಳ ಹಿಂದೆ, ಸಂಭವಿಸಿದ ಮಹಾಸ್ಫೋಟ (ಬಿಗ್‌ಬ್ಯಾಂಗ್) ದ ಬಗೆಗೂ ವಿಜ್ಞಾನಿಗಳಿಗೆ ಅಪಾರ ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.
 ಕಪ್ಪು ರಂಧ್ರಗಳ ಘರ್ಷಣೆಯಿಂದಾಗಿ ಉತ್ಪತ್ತಿಯಾದ ಕಾಂತೀಯಅಲೆಗಳನ್ನು ಜಿಡಬ್ಲು150914 ಎಂದು ವಿಜ್ಞಾನಿಗಳು ಅಧಿಕೃತವಾಗಿ ಹೆಸರಿಸಿದ್ದಾರೆ.ವಿಶ್ವದ ಕುರಿತಾದ ವೈಜ್ಞಾನಿಕ ಅನ್ವೇಷಣೆಯಲ್ಲಿ ಹೊಸ ಶಕೆಗೆ ಈ ಸಂಶೋಧನೆ ನಾಂದಿ ಹಾಡಲಿದೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News