×
Ad

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ : ಸುಳ್ಯ ಚುನಾವಣಾಧಿಕಾರಿ ಅರುಣಪ್ರಭ ಖಡಕ್ ಎಚ್ಚರಿಕೆ

Update: 2016-02-12 17:41 IST

ಸುಳ್ಯ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಚುನಾವಣಾಧಿಕಾರಿ ಅರುಣಪ್ರಭರವರ ಅಧ್ಯಕ್ಷತೆಯಲ್ಲಿ ತಾಲೂಕು ಕಛೇರಿ ಸಭಾಭವನದಲ್ಲಿ ನಡೆಯಿತು.

ಸಹಾಯಕ ಚುನಾವಣಾಧಿಕಾರಿ ಅನಂತಶಂಕರ್, ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಸತೀಶ್, ಎಸ್.ಐ.ಚಂದ್ರಶೇಖರ್, ಜಿ.ಪಂ. ಎಇಇ ಮಹೇಶ್, ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪದ್ಮನಾಭ ನೆಟ್ಟಾರು , ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಚುನಾವಣಾ ಖರ್ಚುವೆಚ್ಚಗಳ ಮೇಲ್ವಿಚಾರಕರಾದ ಮಾಲತಿ, , ಆರ್.ಐ. ಅವಿನ್ ರಂಗತ್ತಮಲೆ, ಉಪತಹಶೀಲ್ದಾರ್‌ಗಳಾದ ಲಿಂಗಪ್ಪ ನಾಯ್ಕಾ, ರಾಮಣ್ಣ , ಸತೀಶ್ ಕೊಯಿಂಗಾಜೆ, ಸದಾನಂದ, ದಯಾನಂದ ಪತ್ತುಕುಂಜ ದೇವಯ್ಯ, ವಿವಿಧ ಪಕ್ಷಗಳ ಪ್ರತಿನಿಧಿಗಳಾದ ಉಮೇಶ್ ವಾಗ್ಲೆ, ಪಿ.ಎಸ್.ಗಂಗಾಧರ, ಪ್ರವೀಣ್ ಮುಂಡೋಡಿ, ಆನಂದ ಬೆಳ್ಳಾರೆ, ರಾಕೇಶ್ ಕುಂಟಿಕಾನ, ನವೀನ್ ರೈ ಮೇನಾಲ, ಶಿವರಾಮ ರೈ ಸುಬ್ರಹ್ಮಣ್ಯ, ಶ್ರೀಪತಿ ಭಟ್, ಬೀರಾಮೊಯಿದೀನ್ ಕನಕಮಜಲು, ಗುರುಪ್ರಸಾದ್ ಪಂಜ, ಸಚಿನ್‌ರಾಜ್ ಶೆಟ್ಟಿ ಮೊದಲಾದವರು ಇದ್ದರು.

ಸಭೆಯಲ್ಲಿ ಮಾಹಿತಿ ನೀಡಿದ ಚುನಾವಣಾಧಿಕಾರಿ ಅರುಣಪ್ರಭರವರು, ಈ ಬಾರಿಯ ಚುನಾವಣೆ ಶಾಂತಿಯುತವಾಗಿ ನಡೆಯುವಲ್ಲಿ ಎಲ್ಲರು ಸಹಕಾರ ನೀಡಬೇಕು. ಇಲಾಖೆಗಳ ನಿಯಮಗಳನ್ನು ಎಲ್ಲರು ಪಾಲಿಸಬೇಕು. ಉಲ್ಲಂಘಿಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಘರ್ಷಗಳಿಗೆ ಯಾರೂ ಎಡೆಮಾಡಿಕೊಡಬಾರದು. ಚುನಾವಣೆಯ ದಿನ 100 ಮೀ.ನಿಂದ 200 ಮೀ ದೂರ ಅಭ್ಯರ್ಥಿಗಳ ಪರ ಕ್ಯಾನ್‌ವಾಸ್ ಮಾಡಬಹುದು . ಆದರೆ 100 ಮೀ ಒಳಗೆ ಯಾರಾದರೂ ಪ್ರಚಾರ ಮಾಡುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಚುನಾವಣಾ ಪ್ರಚಾರ ಸಭೆ, ರೋಡ್ ಶೋ ಮೊದಲಾದವುಗಳನ್ನು ಮಾಡುವುದಿದ್ದರೆ ಅನುಮತಿ ಪಡೆಯುವುದು ಕಡ್ಡಾಯ. ಮತದಾನದ ದಿನ ವೃದ್ಧರು, ಅಂಗವಿಕಲರು ಹೊರತುಪಡಿಸಿ ಯಾರನ್ನೂ ಕೂಡಾ ಮತದಾನ ಕೇಂದ್ರದ ಬಳಿಗೆ ವಾಹನದಲ್ಲಿ ಕರೆದೊಯ್ಯುವಂತಿಲ್ಲ. ಅಲ್ಲಿ ಅಭ್ಯರ್ಥಿಯ ಫೊಟೋ ಇರುವ ಬ್ಯಾನರನ್ನು ಅಳವಡಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದರು.

 ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಸತೀಶ್‌ರವರು ಮಾತನಾಡಿ, ಸುಮ್ಮನೆ ಕಂಟ್ರೋಲ್ ರೂಂಗೆ ಫೋನ್ ಮಾಡಿ ಏನೇನೋ ದೂರುಗಳನ್ನು ಹೇಳುತ್ತಾರೆ. ಆ ರೀತಿ ಸುಳ್ಳು ದೂರುಗಳನ್ನು ಯಾರೂ ಹೇಳಬೇಡಿ. ಏನೇ ಸಮಸ್ಯೆಗಳಿದ್ದರೂ ನಮಗೆ ತಿಳಿಸಿ. ನಾವು ಸರಿಪಡಿಸುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News