ಸಿಯಾಚಿನ್‌ನಲ್ಲಿ ಮೃತಪಟ್ಟ ಕರ್ನಾಟಕದ ಯೋಧರ ಕುಟುಂಬಕ್ಕೆ ಪರಿಹಾರ ನೀಡಿವ ಭರವಸೆ ಶ್ಲಾಘನೀಯ : ಬಿ.ಜನಾರ್ದನ ಪೂಜಾರಿ
ಮಂಗಳೂರು,ಫೆ.12: ಸಿಯಾಚಿನ್‌ನಲ್ಲಿ ಮೃತಪಟ್ಟ ಕರ್ನಾಟಕದ ಯೋಧರ ಕುಟುಂಬಕ್ಕೆ 25ಲಕ್ಷ ಪರಿಹಾರ, 4 ಎಕರೆ ಜಮೀನು, ಉದ್ಯೋಗ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿರುವುದು ಶ್ಲಾಘನೀಯ ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ನಡೆದುಕೊಂಡ ರೀತಿ ಅವರ ವಿಶಾಲ ಹೃದಯವನ್ನು ತೋರಿಸುತ್ತದೆ. ಈ ಮೂಲಕ ಕರ್ನಾಟಕದ ಜನತೆ ಮೆಚ್ಚುವಂತಹ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಹೇಳಿದರು.
ಸಿಎಂ ವಾಚ್ ಹರಾಜಿಗಿಡಲಿ:
ಮುಖ್ಯಮಂತ್ರಿಗಳು ತಮ್ಮಲ್ಲಿರುವ 70 ಲಕ್ಷದ ವಾಚ್ ತಮಗೆ ಕೊಡುಗೆಯಾಗಿ ಸಿಕ್ಕಿದೆ ಎಂದು ಹೇಳಿದ್ದು ಇದು ಅವರ ವ್ಯಕ್ತಿತ್ವಕ್ಕೆ ಸರಿಯಲ್ಲ. ಈ ವಾಚನ್ನು ಹರಾಜಿಗಿಟ್ಟು ಅದರಿಂದ ಬರುವ ಹಣವನ್ನು ಮೂವರು ಯೋಧರ ಕುಟುಂಬಕ್ಕೆ ನೀಡಲಿ ಎಂದು ಹೇಳಿದರು.
ನನಗೆ ಪಾರ್ಲಿಮೆಂಟಿನಿಂದ ಪ್ರತಿ ತಿಂಗಳು ಬರುವ ಐವತ್ತು ಸಾವಿರದಲ್ಲಿ ಇಪ್ಪತ್ತೈದು ಸಾವಿರ ರೂ ಹಣವನ್ನು ವೃದ್ದರನ್ನು, ಅಂಗವಿಕಲರನ್ನು ಸಲಹುವ ಆಶ್ರಮಗಳಿಗೆ ನೀಡುತ್ತಿದ್ದೇನೆ. ಜನರಿಂದ ನಮಗೆ ಅಧಿಕಾರ ಸಿಕ್ಕಿದ್ದು ಅವರ ಕಷ್ಟಗಳಿಗೆ ಸ್ಪಂದಿಸುವುದು ರಾಜಧರ್ಮ. ಮುಖ್ಯಮಂತ್ರಿಗಳು ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಬೇಕಾಗಿದ್ದು ವಾಚನ್ನು ಹರಾಜು ಮಾಡುವ ಬಗ್ಗೆ ಘೋಷಣೆ ಮಾಡಿ ಅದನ್ನು ಹರಾಜಿಗಿಡಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸುರೇಶ್ ಬಳ್ಳಾಲ್, ಮಹಾಬಲ ಮಾರ್ಲ, ಟಿ.ಕೆ.ಸುಧೀರ್, ಅಪ್ಪಿ ,ಕೇಶವ ಮರೋಳಿ,ನಾಗವೇಣಿ, ಮೋಹನ್ ಮೆಂಡನ್, ರಮಾನಂದ ಪೂಜಾರಿ, ಕರುಣಾಕರ್ ಶೆಟ್ಟಿ, ನೀರಜ್ ಪಾಲ್, ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.