ಮುಳುಗುತ್ತಿದ್ದ ದೋಣಿಯಿಂದ ಸಿರಿಯ ನಿರಾಶ್ರಿತನ ನಾಟಕೀಯ ರಕ್ಷಣೆ
ಬಲಿಕೆಸಿರ್ (ಟರ್ಕಿ), ಫೆ. 12: ಈ ವಾರದ ಆರಂಭದಲ್ಲಿ ಟರ್ಕಿಯಿಂದ ಗ್ರೀಸ್‌ಗೆ ವಲಸಿಗರನ್ನು ಒಯ್ಯುತ್ತಿದ್ದ ದೋಣಿಯೊಂದು ಏಜಿಯನ್ ಸಮುದ್ರದಲ್ಲಿ ಮಗುಚಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ಮುಳುಗುತ್ತಿದ್ದ ದೋಣಿಯ ತುದಿಯಲ್ಲಿ ನಿಂತು ಸಹಾಯಕ್ಕಾಗಿ ಕೂಗುತ್ತಿದ್ದ ವಲಸಿಗನೊಬ್ಬನನ್ನು ಟರ್ಕಿ ತಟ ರಕ್ಷಣಾ ಪಡೆಯ ಹೆಲಿಕಾಪ್ಟರೊಂದು ನಾಟಕೀಯವಾಗಿ ರಕ್ಷಿಸಿದ ಘಟನೆಯೊಂದು ವರದಿಯಾಗಿದೆ.
20 ವರ್ಷದ ಸಿರಿಯದ ನಿರಾಶ್ರಿತ ಪೆಲನ್ ಹುಸೈನ್ ಬಹುತೇಕ ಮುಳುಗಿದ್ದ ದೋಣಿಯ ತುದಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದರು. ದುರಂತದಲ್ಲಿ ಕನಿಷ್ಠ 11 ಮಕ್ಕಳು ಸೇರಿದಂತೆ 27 ಮಂದಿ ಮೃತಪಟ್ಟಿದ್ದರು. ‘‘ನಾನು ಸಮುದ್ರದಲ್ಲಿ 5 ಗಂಟೆಗಳ ಕಾಲ ಇದ್ದೆ. ಒಮ್ಮೆ ಸುತ್ತಲೂ ನೋಡಿದಾಗ ದೋಣಿ ಕಾಣಿಸಿತು. ಬಳಿಕ ದೋಣಿಯನ್ನು ಹಿಡಿದುಕೊಂಡೆ’’ ಎಂದು ಹುಸೈನ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.
‘‘ಜರ್ಮನಿಗೆ ಹೋಗುವುದು ನನ್ನ ಗುರಿಯಾಗಿತ್ತು. ಆದರೆ, ಈಗ ನನ್ನ ಭವಿಷ್ಯ ಅಸ್ಪಷ್ಟವಾಗಿದೆ’’ ಎಂದು ಅವರು ಹೇಳಿದರು.
ದುರಂತಕ್ಕೊಳಗಾದ ದೋಣಿಯ ಮಾಲೀಕರನ್ನು ಗುರುತಿಸುವಲ್ಲಿ ಅಧಿಕಾರಿಗಳಿಗೆ ನೆರವು ನೀಡಲು ಅವರು ಈಗ ಅವರು ಟರ್ಕಿಯಲ್ಲಿದ್ದಾರೆ.