×
Ad

ಕೈಗಾರಿಕ ವಸಾಹತಿಗೆ ನೀರು, ವಿದ್ಯುತ್ ಕಡಿತಗೊಳಿಸಿದ ದಕ್ಷಿಣ ಕೊರಿಯ

Update: 2016-02-12 19:21 IST

ಪಜು (ದಕ್ಷಿಣ ಕೊರಿಯ), ಫೆ. 12: ಉತ್ತರ ಕೊರಿಯದ ಕೈಸಾಂಗ್‌ನಲ್ಲಿ ತಾನು ನಡೆಸುತ್ತಿದ್ದ ಕೈಗಾರಿಕಾ ವಸಾಹತಿನ ವಿದ್ಯುತ್ ಮತ್ತು ನೀರು ಸಂಪರ್ಕವನ್ನು ದಕ್ಷಿಣ ಕೊರಿಯ ಕಡಿತಗೊಳಿಸಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದರು. ಕೈಗಾರಿಕಾ ವಸಾಹತಿನಲ್ಲಿದ್ದ ಎಲ್ಲ ದಕ್ಷಿಣ ಕೊರಿಯದ ಕಾರ್ಮಿಕರನ್ನು ವಾಪಸ್ ಕಳುಹಿಸಿ, ವಸಾಹತನ್ನು ಸೇನೆಯ ಸುಪರ್ದಿಗೆ ಉತ್ತರ ಕೊರಿಯ ವಹಿಸಿದ ಒಂದು ದಿನದ ಬಳಿಕ ದಕ್ಷಿಣ ಕೊರಿಯ ಈ ಕ್ರಮ ತೆಗೆದುಕೊಂಡಿದೆ.
ಉತ್ತರ ಕೊರಿಯ ಕಳೆದ ವಾರ ಉಪಗ್ರಹ ಉಡಾವಣೆ ನಡೆಸಿದ ಬಳಿಕ ಈ ವಲಯದಲ್ಲಿನ ಉದ್ವಿಗ್ನತೆ ತಾರಕಕ್ಕೇರಿದೆ.
ಕೈಗಾರಿಕಾ ವಸಾಹತಿನಲ್ಲಿದ್ದ ದಕ್ಷಿಣ ಕೊರಿಯದ 280 ಕೆಲಸಗಾರರನ್ನು ಗುರುವಾರ ರತ್ರಿ ಗಡಿ ದಾಟಿ ದಕ್ಷಿಣ ಕೊರಿಯ ಪ್ರವೇಶಿಸಿದರು. ಉತ್ತರ ಕೊರಿಯದಿಂದ ಹೊರಹೋಗಲು ಅವರಿಗೆ ವಿಧಿಸಲಾಗಿದ್ದ ಗಡುವು ಮುಗಿದ ಹಲವು ಗಂಟೆಗಳ ಬಳಿಕ ಅವರು ಸ್ವದೇಶಕ್ಕೆ ವಾಪಸಾಗಿದ್ದಾರೆ. ಅವರನ್ನು ಉತ್ತರ ಕೊರಿಯ ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳಬಹುದು ಎಂಬ ಭೀತಿ ಇತ್ತಾದರೂ ಅದು ದೂರಾಗಿದೆ.
ಆದರೆ, ಕಾರ್ಖಾನೆಗಳಿಂದ ಪೂರ್ಣಗೊಂಡ ಉತ್ಪನ್ನಗಳು ಮತ್ತು ಸಲಕರಣೆಗಳನ್ನು ತರಲು ಅವರಿಗೆ ಅವಕಾಶ ನೀಡಲಾಗಿಲ್ಲ. ಕೈಗಾರಿಕಾ ವಸಾಹತಿನಲ್ಲಿರುವ ಎಲ್ಲ ಸೊತ್ತುಗಳನ್ನು ಮುಟ್ಟುಗೋಲು ಹಾಕುವುದಾಗಿ ಉತ್ತರ ಕೊರಿಯ ಘೋಷಿಸಿದೆ.
 ಕೈಸಾಂಗ್‌ಗೆ ಪ್ರವೇಶ ಕಲ್ಪಿಸುವ ಎರಡು ಕೊರಿಯಗಳ ನಡುವೆ ಹಾದು ಹೋಗುವ ಹೆದ್ದಾರಿ ಮತ್ತು ಉಭಯ ದೇಶಗಳ ನಡುವಿನ ಎರಡು ಸಂಪರ್ಕ ಹಾಟ್‌ಲೈನ್‌ಗಳನ್ನು ಮುಚ್ಚುವುದಾಗಿ ಉತ್ತರ ಕೊರಿಯ ಘೋಷಿಸಿದೆ.


ಪರಿಣಾಮಕ್ಕೆ ಉತ್ತರ ಕೊರಿಯವೇ ಹೊಣೆ


ಉತ್ತರ ಕೊರಿಯದ ಕೈಸಾಂಗ್‌ನಲ್ಲಿ ಜಂಟಿಯಾಗಿ ನಡೆಸಲಾಗುತ್ತಿದ್ದ ಕೈಗಾರಿಕಾ ವಸಾಹತಿನಿಂದ ಉತ್ತರ ಕೊರಿಯ ದಕ್ಷಿಣ ಕೊರಿಯದ ಕೆಲಸಗಾರರನ್ನು ಹೊರದಬ್ಬಿದ್ದು ಕಾರ್ಖಾನೆಗಳ ಸೊತ್ತುಗಳನ್ನು ಮುಟ್ಟುಗೋಲು ಹಾಕಿದೆ. ಇದಕ್ಕೆ ಉತ್ತರ ಕೊರಿಯವೇ ಹೊಣೆ ಎಂದು ದಕ್ಷಿಣ ಕೊರಿಯ ಶುಕ್ರವಾರ ಹೇಳಿದೆ.
ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಉತ್ತರ ಕೊರಿಯದ ಕ್ರಮ ‘‘ಕಾನೂನುಬಾಹಿರ’’ ಎಂದು ದಕ್ಷಿಣ ಕೊರಿಯದ ಏಕೀಕರಣ ಸಚಿವ ಹಾಂಗ್ ಯಾಂಗ್-ಪ್ಯೊ ಸಿಯೋಲ್‌ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದರು. ದಕ್ಷಿಣ ಕೊರಿಯದ ಕಂಪೆನಿಗಳ ಸೊತ್ತುಗಳಿಗೆ ಯಾವುದೇ ಹಾನಿಯಾಗಬಾರದು ಎಂದು ಅವರು ಉತ್ತರ ಕೊರಿಯಕ್ಕೆ ಎಚ್ಚರಿಕೆ ನೀಡಿದರು.
‘‘ಉತ್ತರ ಕೊರಿಯದ ವರ್ತನೆ ಅತ್ಯಂತ ವಿಷಾದಕರ. ಮುಂದೆ ನಡೆಯುವ ಎಲ್ಲದಕ್ಕೂ ಉತ್ತರ ಕೊರಿಯವೇ ಜವಾಬ್ದಾರಿಯಾಗಿರುತ್ತದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ’’ ಎಂದು ಹಾಂಗ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News