ಮೋದಿ ಕಾರ್ಯಕ್ರಮಕ್ಕೆ ಉದ್ಧವ್‌ಗೆ ಆಹ್ವಾನವಿಲ್ಲ
ಮುಂಬೈ, ಫೆ.12: ಮೇಕ್ ಇನ್ ಇಂಡಿಯಾ ಸಪ್ತಾಹದ ಅಂಗವಾಗಿ ಮುಂಬೈಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮುಂಬೈಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಹ್ವಾನಿಸಲಾಗಿಲ್ಲ. ಈ ಕಾರ್ಯಕ್ರಮಗಳ ಅಂಗವಾಗಿ ಫೆ.13ರಂದು ಮುಂಬೈಯಲ್ಲಿ ನಡೆಯಲಿರುವ ಅದ್ದೂರಿ ಭೋಜನಕೂಟಕ್ಕೂ ಅವರಿಗೆ ಆಹ್ವಾನ ನೀಡಲಾಗಿಲ್ಲ.
ನರೇಂದ್ರ ಮೋದಿ ಶನಿವಾರ ಮುಂಬೈಗೆ ಆಗಮಿಸಲಿದ್ದು, ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿ ಮೇಕ್ ಇನ್ ಇಂಡಿಯಾ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಮಹಾಲಕ್ಷ್ಮೀ ರೇಸ್‌ಕೋರ್ಸ್‌ನ ಟರ್ಫ್ ಕ್ಲಬ್‌ನಲ್ಲಿ ಸಂಜೆ ನಡೆಯಲಿರುವ ಭೋಜನಕೂಟದ ಅಧ್ಯಕ್ಷತೆ ವಹಿಸಲಿದ್ದಾರೆ.ಈ ಭೋಜನಕೂಟದಲ್ಲಿ ದೇಶ, ವಿದೇಶಗಳ ಸುಮಾರು 800 ಮಂದಿ ಗಣ್ಯರು ಭಾಗವಹಿಸಲಿದ್ದಾರೆಂದು ಮಹಾರಾಷ್ಟ್ರ ಸರಕಾರದ ಪ್ರಧಾನ ಕಾರ್ಯದರ್ಶಿ ಸ್ವಾಧೀನ್ ಕ್ಷತ್ರಿಯ ತಿಳಿಸಿದ್ದಾರೆ.
ವಿವಿಧ ದೇಶಗಳ ಪ್ರಧಾನಿಗಳು, ಕೈಗಾರಿಕೋದ್ಯಮಿಗಳು ಹಾಗೂ ಸರಕಾರದ ಉನ್ನತ ಅಧಿಕಾರಿಗಳು ಭೋಜನಕೂಟದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.