×
Ad

ಕೈದಿ ಸಂಜಯ್ ದತ್ತ್‌ರ ರೇಡಿಯೊ ಕಾರ್ಯಕ್ರಮ ಯೆರವಾಡದಲ್ಲಿ ಜನಪ್ರಿಯ!

Update: 2016-02-12 23:28 IST

ಮುಂಬೈ, ಫೆ.12: ಜನಪ್ರಿಯ ಚಿತ್ರ ‘ಲಗೇ ರಹೋ ಮುನ್ನಾ ಭಾಯಿ’ಯಲ್ಲಿ ಅಪರಾಧಿಯಾಗಿದ್ದವನು ರೇಡಿಯೊ ಜಾಕಿಯಾದ ಪಾತ್ರದ ಮೂಲಕ ಶ್ಲಾಘನೆ ಪಡೆದಿದ್ದ ಸಂಜಯ್ ದತ್, ಯೆರವಾಡ ಕೇಂದ್ರ ಕಾರಾಗೃಹದ ಆಕಾಶವಾಣಿ ಕೇಂದ್ರದಲ್ಲೂ ರೇಡಿಯೊ ಜಾಕಿ (ಆರ್‌ಜೆ) ಹಾಗೂ ನಿರ್ಮಾಪಕನಾಗಿ ಅಂತಹದೇ ಯಶಸ್ಸು ಗಳಿಸಿದ್ದಾರೆ.

 ಶಿಕ್ಷೆಗೊಳಗಾಗಿರುವ ಬಾಲಿವುಡ್ ನಟ ಕಳೆದ ತಿಂಗಳು, ‘ಆಪ್ ಕೀ ಫರ್ಮಾಯಿಶ್’ ಎಂಬ ಹೊಸ ಕಾರ್ಯಕ್ರಮವೊಂದನ್ನು ನೀಡಲಾರಂಭಿಸಿದ್ದರು. ಅದು ಶ್ರೋತೃಗಳ ಅಪೇಕ್ಷೆಯ ಹಾಡುಗಳು, ಕವಿತೆಗಳು ಮಾತ್ರವಲ್ಲದೆ ಚಿತ್ರ ಸಂಭಾಷಣೆಯನ್ನೂ ಬಿತ್ತರಿಸುವ ಕಾರ್ಯಕ್ರಮವಾಗಿದೆ.
ದತ್‌ರ ಬಿಡುಗಡೆಗೆ ತಿಂಗಳಿಗೂ ಕಡಿಮೆ ದಿನಗಳಿದ್ದು, ಹೆಚ್ಚಿನ ಕೈದಿಗಳು ತಮ್ಮ ಕೋರಿಕೆಗಳನ್ನು ಅವರಿಗೆ ಸಮರ್ಪಿಸುತ್ತಿದ್ದಾರೆ.
ಪುಣೆಯ ಯೆರವಾಡ ಕಾರಾಗೃಹದ, ಅತ್ಯಂತ ಬಿಗು ಭದ್ರತೆಯ ಅಂಡಾಸೆಲ್ ಹಾಗೂ 30 ಬ್ಯಾರಕ್‌ಗಳಲ್ಲಿ 4,133 ಕೈದಿಗಳಿದ್ದಾರೆ. ಕೈದಿಗಳ ಸೃಜನ ಶೀಲತೆಯನ್ನು ಸುಧಾರಿಸಲು ಹಾಗೂ ಅವರನ್ನು ಸಹಾ ಕೆಲಸದಲ್ಲಿ ತೊಡಗಿರುವಂತೆ ಮಾಡಲು ಕಳೆದ ವರ್ಷ ಜುಲೈಯಲ್ಲಿ ಅಲ್ಲಿ ರೇಡಿಯೊ ಕೇಂದ್ರವೊಂದನ್ನು ಆರಂಭಿಸಲಾಗಿತ್ತು.
ಪ್ರಾಯೋಗಿಕ ನೆಲೆಯಲ್ಲಿ ಆರಂಭಿಸಲಾದ ಬಾನುಲಿ ಕೇಂದ್ರವೀಗ, ವಾರಾಂತ್ಯಗಳಲ್ಲೂ ಕಾರ್ಯನಿರ್ವಹಿಸುವಷ್ಟು ಜನಪ್ರಿಯವಾಗಿದೆ.
1993ರ ಮುಂಬೈ ಸ್ಫೋಟ ಸಂಬಂಧಿ ಪ್ರಕರಣವೊಂದರಲ್ಲಿ ಈಗ ಯೆರವಾಡ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಂಜಯ್ ದತ್, ಕಾರ್ಯಕ್ರಮ ನಿರ್ವಾಹಕರಾಗಿ ಸ್ವಾಭಾವಿಕ ಆಯ್ಕೆಯಾಗಿದ್ದಾರೆ.
ಅವರು, ಬಂದಿಖಾನೆಯಲ್ಲಿ ಪೇಪರ್ ಬ್ಯಾಗ್‌ಗಳನ್ನೂ ತಯಾರಿಸುತ್ತಿದ್ದು, ಇತರ ಮೂವರು ಸಹ ಕೈದಿಗಳೊಂದಿಗೆ ಆರ್‌ಜೆಯೂ ಆಗಿದ್ದಾರೆ. ಈಗ ಅವರು ನೀಡುತ್ತಿರುವ ‘ಆಪ್ ಕೀ ಫರ್ಮಾಯಿಶ್’ ಕಾರ್ಯಕ್ರಮದಲ್ಲಿ ದತ್, ಅವರ ಚಿತ್ರಗಳ ಒಂದೆರಡು ಹಾಡುಗಳು ಹಾಗೂ ಕನಿಷ್ಠ ಒಂದಾದರೂ ಅವರ ಪ್ರಖ್ಯಾತ ಸಂಭಾಷಣೆಗಾಗಿ ಪ್ರತಿ ದಿನ ಬೇಡಿಕೆ ಪಡೆಯುತ್ತಿದ್ದಾರೆ.
ಪ್ರತಿ ದಿನ ಮಧ್ಯಾಹ್ನ 11ರಿಂದ 2 ಗಂಟೆಯವರೆಗೆ 4 ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಈ ಕಾರ್ಯಕ್ರಮಗಳನ್ನು ಕಾರಾಗೃಹ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದತ್ ಹಾಗೂ ಅವರ ಮೂವರು ಸಹ ಕೈದಿಗಳು ನಡೆಸಿಕೊಡುತ್ತಾರೆ.
 ಕಾರಾಗೃಹದ ಎಲ್ಲ 30 ಬ್ಯಾರಕ್‌ಗಳಲ್ಲೂ ಸಲಹಾ ಪೆಟ್ಟಿಗೆಗಳನ್ನಿರಿಸಲಾಗಿದೆ. ಅವುಗಳ ಮೂಲಕ ಕೈದಿಗಳು ತಾವೇ ರಚಿಸಿದ ಕವಿತೆ, ಶಾಯರಿ ಅಥವಾ ಹಾಡುಗಳನ್ನು ಪ್ರಸಾರಿಸುವ ಬೇಡಿಕೆ ಸಲ್ಲಿಸಬಹುದು. ನಾಲ್ವರು ಆರ್‌ಜೆಗಳು ಹಾಗೂ ಬಂದಿಖಾನೆ ಅಧಿಕಾರಿಗಳು ಈ ಬೇಡಿಕೆಗಳನ್ನು ಹಾಗೂ ಲಭ್ಯ ಹಾಡುಗಳನ್ನು ಆಧರಿಸಿ ವಸ್ತುವೊಂದನ್ನು ಸಿದ್ಧಪಡಿಸುತ್ತಾರೆ. ಕಾರ್ಯಕ್ರಮಗಳನ್ನು ಒಂದು ದಿನ ಮುಂಚಿತವಾಗಿಯೇ ಯೋಜಿಸಲಾಗುತ್ತದೆಂದು ಪ್ರಕ್ರಿಯೆಯ ಕುರಿತು ಕಾರಾಗೃಹದ ಮೂಲವೊಂದು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News