×
Ad

ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ: ಮಕ್ಕಳಲ್ಲಿ ಗೊಂದಲ

Update: 2016-02-12 23:58 IST

ಬೆಳ್ತಂಗಡಿ, ಫೆ.12: ಎಸೆಸೆಲ್ಸಿ 2016ರ ದ.ಕ. ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯಿಂದ ಮಕ್ಕಳಲ್ಲಿ ಗೊಂದಲ ಉಂಟಾಗಿದೆ. ತಾಲೂಕು ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ಈಗಾಗಲೇ ನಡೆದಿದ್ದು, ಇದೀಗ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ದ.ಕ. ಜಿಲ್ಲಾ ಮಟ್ಟದಲ್ಲಿ ತಯಾರಿಸಲಾದ ಪ್ರಶ್ನೆ ಪತ್ರಿಕೆಯಲ್ಲಿ ‘ಎ’ ಹಾಗೂ ‘ಬಿ’ ಸೀರಿಸ್ ಎರಡು ವಿಧಗಳಿವೆ. ‘ಎ’ ಸೀರಿಸ್‌ನ ಪ್ರಶ್ನೆ ಪತ್ರಿಕೆಯಲ್ಲಿ ನೀಡ ಲಾದ ಪ್ರಶ್ನೆಗಳಿಗೂ ‘ಬಿ’ ಸೀರಿಸ್‌ನ ಪ್ರಶ್ನೆಗ ಳಿಗೂ ವ್ಯತ್ಯಾಸಗಳಿವೆ.

16 ಪುಟಗಳುಳ್ಳ ಪುಸ್ತಕವನ್ನು ವಿದ್ಯಾರ್ಥಿ ಗಳಿಗೆ ನೀಡಲಾಗುತ್ತಿದೆ. ಅದರಲ್ಲಿ ಪ್ರಶ್ನೆಗ ಳನ್ನು ನೀಡಿದ್ದು, ಅದರಲ್ಲಿಯೇ ಉತ್ತರವನ್ನು ಬರೆಯಬೇಕು. ಆದರೆ ಉತ್ತರಗಳನ್ನು ಬರೆಯಲು ಸಾಕಷ್ಟು ಸ್ಥಳಾವಕಾಶವಿಲ್ಲ. ಇದರಿಂದ ಮಕ್ಕಳಲ್ಲಿ ಗೊಂದಲ ಉಂಟಾಗಿದೆ.ಗಣಿತ, ವಿಜ್ಞಾನ, ಸಮಾಜವಿಜ್ಞಾನ ವಿಷಯದ ಪಠ್ಯಕ್ಕೆ ‘ಎ’ ಮತ್ತು ‘ಬಿ’ ಸೀರಿಸ್ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತಿದೆ. ಆದರೆ ಭಾಷಾ ವಿಷಯಗಳಿಗೆ ಎಲ್ಲರಿಗೂ ಒಂದೇ ಪ್ರಶ್ನೆ ಪತ್ರಿಕೆ ಇದೆ. ಇದೀಗ ಗೊಂದಲ ಕ್ಕೊಳಗಾಗಿರುವ ವಿದ್ಯಾರ್ಥಿಗಳಲ್ಲಿ ಮನೋ ಸ್ಥೈರ್ಯವನ್ನು ತುಂಬಿಸಬೇಕಾಗಿದೆ.

ಒಂದೇ ತರಗತಿಯ, ಅಕ್ಕಪಕ್ಕ ಕುಳಿತ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳು ಬೇರೆ ಬೇರೆಯಾಗಿರುವುದು, ಇದರ ಬಗ್ಗೆ ತಾಲೂಕಿನಲ್ಲಿ ಯಾವುದೇ ಅಧ್ಯಾಪಕರಿಗೂ ಮಾಹಿತಿ ಇಲ್ಲದಿರುವುದರಿಂದ ಗೊಂದಲ ಉಂಟಾಗಿದೆ. ಒಂದು ತರಗತಿಯಲ್ಲಿ 50 ವಿದ್ಯಾರ್ಥಿಗಳಿದ್ದರೆ 25 ವಿದ್ಯಾರ್ಥಿಗಳಿಗೆ ‘ಎ’ ಸೀರಿಸ್ ಉಳಿದ 25 ಮಕ್ಕಳಿಗೆ ‘ಬಿ’ ಸೀರಿಸ್ ಪ್ರಶ್ನೆಪತ್ರಿಕೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚುವ ಸಾಧ್ಯತೆ ಇದೆ ಎಂದು ಕೆಲವರ ಅಭಿಪ್ರಾಯ. ಆದರೆ ಯಾವುದೇ ಪೂರ್ವ ಸೂಚನೆ ನೀಡದೆ ಇಂತಹ ಕಲಿಕಾ ಗುಣಮಟ್ಟದ ಪ್ರಯೋಗವನ್ನು ಮಾಡಿ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವುದು ಸರಿಯಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News