ಬ್ರಿಟನ್‌ನ ‘ಇಂಡಿಪೆಂಡೆಂಟ್’ ಪತ್ರಿಕೆ ಮುಚ್ಚಲು ಕ್ಷಣಗಣನೆ

Update: 2016-02-13 18:27 GMT

ಲಂಡನ್, ಫೆ. 13: ಜಗತ್ತಿನ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಲ್ಲಿ ಒಂದಾಗಿದ್ದ ಬ್ರಿಟನ್‌ನ ‘ಇಂಡಿಪೆಂಡೆಂಟ್’ ಮುಂದಿನ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇಂಟರ್‌ನೆಟ್ ಒಡ್ಡಿರುವ ಸವಾಲನ್ನು ಎದುರಿಸಲಾಗದೆ, ಪತ್ರಿಕೆಯನ್ನು ಮುಚ್ಚುವ ನಿರ್ಧಾರವನ್ನು ಅದರ ಮಾಲಕರು ತೆಗೆದುಕೊಂಡಿದ್ದಾರೆ.
ಆದಾಗ್ಯೂ, ಪತ್ರಿಕೆಯ ಇಂಟರ್‌ನೆಟ್ ಆವೃತ್ತಿ ಮುಂದುವರಿಯುತ್ತದೆ.
ಪತ್ರಿಕೆಯನ್ನು 1986ರಲ್ಲಿ ಪತ್ರಕರ್ತರ ಗುಂಪೊಂದು ‘‘ಇಂಡಿಪೆಂಡೆಂಟ್ (ಸ್ವತಂತ್ರ), ಅದು ಹೌದು- ನೀವು?’’ ಎಂಬ ಘೋಷ ವಾಕ್ಯದೊಂದಿಗೆ ಪತ್ರಿಕೆಯನ್ನು ಆರಂಭಿಸಿತ್ತು.ತರ ಪತ್ರಿಕೆಗಳಿಗಿಂತ ಭಿನ್ನ ದಾರಿ ತುಳಿದ ಹಾಗೂ ಭಿನ್ನ ಸುದ್ದಿಗಳ ಬೆನ್ನತ್ತಿದ ಪತ್ರಿಕೆ ದೊಡ್ಡ ಮಟ್ಟದಲ್ಲಿ ಪ್ರತಿಷ್ಠೆಯನ್ನು ಗಳಿಸಿಕೊಂಡಿತ್ತು. ಅದು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಹೆಚ್ಚು ಒತ್ತು ನೀಡುತ್ತಿತ್ತು.

ಇತರ ಪತ್ರಿಕೆಗಳು ರಾಜ ಕುಟುಂಬಗಳಲ್ಲಿ ನಡೆಯುವ ಮದುವೆಗಳು, ಹುಟ್ಟುಗಳು ಮತ್ತು ಸಾವುಗಳ ವರ್ಣರಂಜಿತ ಸುದ್ದಿ ಮಾಡಿದರೆ, ‘ಇಂಡಿಪೆಂಡೆಂಟ್’ ಮಧ್ಯ ಪ್ರಾಚ್ಯದಲ್ಲಿನ ಯುದ್ಧಗಳು ಮತ್ತು ವಿಜ್ಞಾನದಲ್ಲಿನ ಬೆಳವಣಿಗೆಗಳು ಮುಂತಾದ ವಿಷಯಗಳತ್ತ ಗಮನ ಹರಿಸುತ್ತಿತ್ತು.1990ರ ದಶಕದ ತನ್ನ ಉಛ್ರಾಯ ಕಾಲದಲ್ಲಿ ಸ್ವಲ್ಪ ಸಮಯ ಪ್ರಸಾರ ಸಂಖ್ಯೆಯಲ್ಲಿ ಅದು ರೂಪರ್ಟ್ ಮರ್ಡೋಕ್‌ರ ‘ಟೈಮ್ಸ್’ ಪತ್ರಿಕೆಯನ್ನೂ ಹಿಂದಿಕ್ಕಿತ್ತು. ಅಂದು ದಿನವೊಂದಕ್ಕೆ ಪತ್ರಿಕೆಯ ಸುಮಾರು 4 ಲಕ್ಷ ಪ್ರತಿಗಳು ಮಾರಾಟಗೊಂಡಿದ್ದವು. ಆದರೆ, ಇಂದು ಪ್ರಸಾರ 40,000ಕ್ಕೆ ಕುಸಿದಿದೆ. ಬ್ರಾಡ್‌ಶೀಟ್ ಮಾದರಿಯಿಂದ ಟ್ಯಾಬ್ಲಾಯಿಡ್‌ಗೆ ಗಾತ್ರ ಪರಿವರ್ತಿಸಲಾಯಿತಾದರೂ ಅದು ಜನಮನವನ್ನು ಆಕರ್ಷಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News