ಕಾಂಗ್ರೆಸ್‌ಗೆ ಸವಾಲಾದ ಬಂಡಾಯ ಅಭ್ಯರ್ಥಿಗಳು

Update: 2016-02-13 18:43 GMT

ಇನ್ನೂ ಬಿಡುಗಡೆಯಾಗದ ದ.ಕ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ
ಮಂಗಳೂರು, ಫೆ.13: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಪರ ಪ್ರಚಾರ ನಡೆಸಲು ಇನ್ನು ಕೇವಲ 3 ದಿನಗಳು ಬಾಕಿ ಉಳಿದಿವೆ. ಆದರೆ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಇನ್ನೂ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಅಲ್ಲದೆ, ಪಕ್ಷದ ಬಂಡಾಯ ಶಮನಗೊಳಿಸಲು ಸಾಧ್ಯವಾಗದೆ ಕೆಲವೆಡೆ ಬಿಜೆಪಿ ಹಾಗೂ ಇತರ ಸ್ಪರ್ಧಿಗಳ ಜೊತೆ ಬಂಡಾಯ ಅಭ್ಯರ್ಥಿಗಳನ್ನು ಎದುರಿಸಬೇಕಾದ ಪರಿಸ್ಥಿತಿಯನ್ನು ಜಿಲ್ಲಾ ಕಾಂಗ್ರೆಸ್ ಎದುರಿಸುತ್ತಿದೆ.
 ಜಿಪಂನ ಪ್ರಮುಖ ಕ್ಷೇತ್ರಗಳಾದ ಬಂಟ್ವಾಳ ತಾಲೂಕಿನ ಕೊಳ್ನಾಡು ಹಾಗೂ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದು ಕಾಂಗ್ರೆಸ್‌ಗೆ ಸವಾಲಾಗಿದ್ದಾರೆ. ಇನ್ನು ಕಡಬ ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾಜಿ ಜಿಲ್ಲಾ ಪರಿಷತ್ ಸದಸ್ಯ ಮೀರಾ ಸಾಹೇಬ್ ಇದೀಗ ಬಂಡಾಯ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.
  ಫೆ.20ರಂದು ಚುನಾವಣೆ ನಡೆಯಲಿದೆ. ಅಖಾಡದಲ್ಲಿ ರುವ ವಿವಿಧ ಪಕ್ಷಗಳು ಈಗಾಗಲೇ ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಎಲ್ಲ ಪಕ್ಷಗಳು ಮತದಾರರ ಬಳಿ ತೆರಳಲು ಆರಂಭಿಸಿದ್ದರೆ, ಜಿಲ್ಲಾ ಕಾಂಗ್ರೆಸ್ ಮಾತ್ರ ಪ್ರಣಾಳಿಕೆಯನ್ನೇ ಬಿಡುಗಡೆ ಮಾಡಿಲ್ಲ. ಉಡುಪಿ ಜಿಲ್ಲಾ ಕಾಂಗ್ರೆಸ್ ಫೆ.12ರಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದರೆ, ದ.ಕ ಜಿಲ್ಲಾ ಬಿಜೆಪಿ ಫೆ.11ರಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ.
ದ.ಕ.ದಲ್ಲಿ ಜಿಪಂ ಹಾಗೂ ಕೆಲವು ತಾಪಂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಇದಲ್ಲದೆ, ಕೆಲವೆಡೆಗಳಲ್ಲಿ ಪಕ್ಷೇತರರಾಗಿ ಕಣ ದಲ್ಲಿರುವ ಬಂಡಾಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಎದುರಿ ಸಬೇಕಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆ, ಮಂಗಳೂರು ತಾಲೂಕಿನ ತಲಪಾಡಿ ತಾಪಂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೂ ಬಳಿಕ ಹಿಂಪಡೆದಿದ್ದಾರೆ. ಇನ್ನು ಕಾಂಗ್ರೆಸ್‌ನ ಪ್ರಮುಖ ಜಿಪಂ ಕ್ಷೇತ್ರಗಳಾದ ಕೊಳ್ನಾಡು ಮತ್ತು ಅಳದಂಗಡಿಯಲ್ಲಿ ಬಂಡಾಯ ಅಭ್ಯರ್ಥಿ ಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಕೊಳ್ನಾಡಿನಲ್ಲಿ ಜಿಪಂಗೆ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಕಣದಲ್ಲಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ವಿಟ್ಲ ಬ್ಲಾಕ್ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅಳದಂಗಡಿಯಲ್ಲೂ ಇದೇ ರೀತಿ ಟಿಕೆಟ್ ವಂಚಿತ ಕಾಂಗ್ರೆಸ್‌ನ ಈಶ್ವರ ಬೈರ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಶೇಖರ ಕುಕ್ಕೇಡಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿರುವುದು ಕಾಂಗ್ರೆಸ್‌ಗೆ ನುಂಗಲಾಗದ ಬಿಸಿ ತುಪ್ಪವಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದಂದು ಕಾಂಗ್ರೆಸ್ ಪಕ್ಷವು ತಾಪಂ ಚುನಾವಣಾ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಆದರೂ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದನ್ನು ತಡೆಯಲು ಅದಕ್ಕೆ ಸಾಧ್ಯವಾಗಿಲ್ಲ. ಬಿಜೆಪಿಯಲ್ಲೂ ನೆಲ್ಯಾಡಿ ಜಿಪಂ ಕ್ಷೇತ್ರದಿಂದ ಹಾಗೂ ಸುಳ್ಯದ ಪಂಜ ತಾಪಂ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News