ಅಂತರ್‌ಕಾಲೇಜು ತುಳು ಮನೋರಂಜನಾ ಸ್ಪರ್ಧೆ ‘ಸಿರಿತುಪ್ಪೆ 2016’ ಉದ್ಘಾಟನೆ
ಮಂಗಳೂರು, ಫೆ.14: ನಾರಾಯಣಗುರು ಯುವ ವೇದಿಕೆ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿರುವ ಅಂತರ್ ಕಾಲೇಜು ವೈವಿಧ್ಯಮಯ ಮನೋರಂಜನಾ ಸ್ಫರ್ಧೆ ‘ಸಿರಿತುಪ್ಪೆ -2016’ ನಗರದ ಪುರಭವನದಲಿ ್ಲ ರವಿವಾರ ಬೆಳಗ್ಗೆ ಉದ್ಘಾಟನೆಗೊಂಡಿತು.
ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದ ಮೊಕ್ತೇಸರ ಸೀತಾರಾಮ್ ಎ. ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪಾಂಡೇಶ್ವರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ, ತುಳುನಾಡಿನ ಜನರು ಕೃಷಿ ಮೂಲದಿಂದ ಬಂದವರಾಗಿದ್ದು ಇಲ್ಲಿನ ಜನರು ಇಲ್ಲಿನ ಸಂಸ್ಕೃತಿ ಬದುಕು ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ತುಳುಸಂಸ್ಕೃತಿಗೆ ಪರ್ಯಾಯವಾಗಿ ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು. ರಂಗನಟ ವಿ.ಜಿ.ಪಾಲ್ ಮಾತನಾಡಿ, ತುಳು ಭಾಷೆಯನ್ನು 8ನೆ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ಮೂಲಕ ತುಳು ಭಾಷಾ ಕಲಾವಿದರಿಗೆ, ತುಳು ಭಾಷಿಕರಿಗೆ ಅನುಕೂಲವಾಗಲಿದೆ. ಸಿರಿತುಪ್ಪೆಯಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರಿಸಿ ತುಳು ಭಾಷೆಯನ್ನು 8ನೆ ಪರಿಚ್ಛೇಧಕ್ಕೆ ಸೇರಿಸಲು ಒತ್ತಡವನ್ನು ಹಾಕಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಅಕ್ಷಿತ್ ಸುವರ್ಣ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಡಿ.ಎಂ.ಕುಲಾಲ್, ಮಂಗಳೂರು ನಾರಾಯಣ ಗುರು ಯುವ ವೇದಿಕೆಯ ಅಧ್ಯಕ್ಷ ಲೋಹಿತ್‌ಕುಮಾರ್ ಉಪಸ್ಥಿತರಿದ್ದರು.
ನೀಲಯ್ಯ ಸ್ವಾಗತಿಸಿದರು. ಬ್ರಿಜೆಶ್ ಅಂಚನ್ ವಂದಿಸಿದರು. ಚೇತನ್ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು.