×
Ad

ಸಮುದ್ರದಲ್ಲಿ ಈಜಲು ತೆರಳಿದ ಹಾಸನ ಮೂಲದ ನಾಲ್ಕು ಯುವಕರು ನೀರುಪಾಲು :ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ

Update: 2016-02-14 17:06 IST

ಉಳ್ಳಾಲ: ಸಮುದ್ರದಲ್ಲಿ ಸ್ನಾನಕ್ಕೆಂದು ಹಾಸನ ಮೂಲದ ಆರು ಮಂದಿ ಯುವಕರ ಪೈಕಿ ನಾಲ್ವರು ಸಮುದ್ರಪಾಲಾಗಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರದಲ್ಲಿ ಭಾನುವಾರ ಮಧ್ಯಾಹ್ನ ವೇಳೆ ನಡೆದಿದೆ.

  ನಾಪತ್ತೆಯಾದವರನ್ನು ಹಾಸನದ ಹುಣಸೀಕೆರೆ ರಸ್ತೆಯ ಮಿರ್ಜಾ ಮೊಹಲ್ಲಾ ನಿವಾಸಿಗಳಾದ ಇಕ್ಬಾಲ್ ಪಾಶಾ ಎಂಬವರ ಪುತ್ರ ಇಮ್ರಾನ್ ಪಾಶಾ(19) ಖಲಂದರ್ ಎಂಬವರ ಮಹಮ್ಮದ್ ಸಿಯಾಬ್(19), ಮಹಮ್ಮದ್ ಶಬೀರ್ ಎಂಬವರ ಪುತ್ರ ಮಹಮ್ಮದ್ ಹನೀಫ್ (20), ಮಹಮ್ಮದ್ ಫಿರೋರ್ ಎಂಬವರ ಪುತ್ರ ಶಹೀದ್ ಖಲೀಲ್ (19) ಗುರುತಿಸಲಾಗಿದೆ.ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

           ಬಶೀರ್ ಅಹಮ್ಮದ್ ಎಂಬವರ ಪುತ್ರ ಸಕಲೆಂ ಸಾಹಿಲ್ ಮತ್ತು ಮಹಮ್ಮದ್ ಫಾಝಿಲ್ ಪುತ್ರ ಸಾದಿಕ್ ಪಾಶಾ ಬದುಕುಳಿದವರಾಗಿದ್ದಾರೆ. ಹಾಸನದಿಂದ ಮೂರು ಬೈಕುಗಳಲ್ಲಿ ಉಳ್ಳಾಲ ದರ್ಗಾ ಸಂದರ್ಶನ ಮತ್ತು ಸಮುದ್ರ ವಿಹಾರಕ್ಕೆಂದು ಬಂದಿದ್ದ ಆರು ಜನರ ತಂಡ ದರ್ಗಾ ಹೋಗುವ ಮುನ್ನ ಸೋಮೇಶ್ವರ ಸಮುದ್ರ ತೀರಕ್ಕೆ ಮಧ್ಯಾಹ್ನ 1.30ರ ಹೊತ್ತಿಗೆ ಆಗಮಿಸಿದ್ದರು. 2.30ರ ಸಮಯದಲ್ಲಿ ಮೊದಲಿಗೆ ಖಲೀಲ್ ಸಮುದ್ರಕ್ಕಿಳಿದಿದ್ದ. ಈ ವೇಳೆ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿದ ಪರಿಣಾಮ ಖಲೀಲ್ ಸಮುದ್ರ ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಇದನ್ನು ಕಂಡ ಸ್ನೇಹಿತರು ಒಬ್ಬರೊಬ್ಬರೇ ಹಾರಿ ರಕ್ಷಣೆಗೆ ಯತ್ನಿಸಿದರೂ ಇತರ ಮೂವರು ಸಮುದ್ರದ ಅಲೆಗಳಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ದಡದ ಮೇಲೆ ಉಳಿದಿದ್ದ ಸಾಹಿಲ್ ಮತ್ತು ಸಾದಿಕ್ ಇಬ್ಬರೂ ಬಲೆ ಹಾಕಿ ಸ್ನೇಹಿತರನ್ನು ಉಳಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ನೀರುಪಾಲದವಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಎನ್ನಲಾಗಿದೆ.

ಬದುಕುಳಿದವರಲ್ಲಿ ಶಾಹಿಲ್ ಎಂಬಾತ ಹಾಸನ ಸರಕಾರಿ ಡಿಪ್ಲೋಮಾ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದರೆ, ಸಾಧಿಕ್ ಕರಾಟೆ ತರಬೇತುದಾರನಾಗಿದ್ದಾನೆ . ಸಮುದ್ರಪಾಲಾದವರ ಬಗ್ಗೆ ಶೋಧ ಮುಂದುವರೆದಿದ್ದು ,ಉಳ್ಳಾಲ ಪೋಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ .

ಸೋಮೇಶ್ವರ ಉಚ್ಚಿಲದ ನಡುವೆ ದುರಂತ

 ಈಜುರಕ್ಷಕ ದಳದ ಅಶೋಕ್ ಮತ್ತು ಸಿಬ್ಬಂದಿಗಳು ರಕ್ಷಿಸಲು ಬಂದರೂ ಪ್ರಯೋಜನವಾಗಿಲ್ಲ .ಸೋಮೇಶ್ವರ ಮತ್ತು ಉಚ್ಚಿಲದ ನಡುವಿನ ಸಮುದ್ರಕಿನಾರೆಯಲ್ಲಿ ಇಂತಹ ದುರಂತ ನಡೆದದ್ದು ಪ್ರಥಮ. ಈಜುರಕ್ಷಕದವರು ಹೆಚ್ಚಾಗಿ ರುದ್ರಪಾದೆಯಲ್ಲೇ ಪಹರೆ ಕಾಯುತ್ತಿರುತ್ತಾರೆ .ಇದುವರೆಗೂ ಸೋಮೇಶ್ವರ ರುದ್ರ ಪಾದೆ ಮತ್ತು ಉಳ್ಳಾಲ ಬೀಚ್‌ಗಳಲ್ಲೇ ಇಂತಹ ದುರಂತಗಳು ಹೆಚ್ಚಾಗಿ ಸಂಭವಿಸುತ್ತಿದ್ದವು ಎಂದು ಅಶೋಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News