ಮುಡಿಪುವಿನಲ್ಲಿ ಮತ್ತೆ ಪ್ರತ್ಯಕ್ಷವಾದ ಗುಹೆ
ಕೊಣಾಜೆ: ಮುಡಿಪು ಸಮೀಪದ ಇನ್‌ಫೋಸಿಸ್ ಬಳಿಯ ಪುಚ್ಚೆಕಟ್ಟೆ ಎಂಬಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದಾಗ ಭಾನುವಾರ ಗುಹೆಯೊಂದು ಪತ್ತೆಯಾಗಿ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಯಿತು.
ಕಳೆದ ಮೂರು ವರ್ಷಗಳ ಹಿಂದೆ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದಾಗ ಪುಚ್ಚೆಕಟ್ಟೆ ಬಳಿ ಗುಹೆ ಪತ್ತೆಯಾಗಿತ್ತು. ಬಳಿಕ ಈ ಗುಹೆಯನ್ನು ನೋಡಲು ದೂರದ ಊರಿಂದಲೂ ಜನ ಬಂದಿದ್ದರು. ಅಂದು ಪತ್ತೆಯಾದ ಗುಹೆಯ ಬಳಿಯೇ ಇದೀಗ ಮತ್ತೊಂದು ಭಾಗದಲ್ಲಿ ಇದೇ ಗುಹೆಯು ಮತ್ತೆ ಪ್ರತ್ಯಕ್ಷವಾಗಿದೆ. ಮುಡಿಪು ರಸ್ತೆಯ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಇನ್‌ಫೋಸಿಸ್ ಬಳಿಯ ಪುಚ್ಚೆಕಟ್ಟೆ ಬಳಿ ಜೆಸಿಬಿ ಯಂತ್ರದ ಮೂಲಕ ರಸ್ತೆ ಬದಿಯನ್ನು ಅಗೆಯುತ್ತಿದ್ದಾಗ ಗುಹೆ ಪತ್ತೆಯಾಗಿದೆ. ಬಳಿಕ ಇದರೊಳಗೆ ಇಳಿದ ಕೆಲವರು ಗುಹೆಯು ವಿಶಾಲವಾಗಿದ್ದು ಎರಡು ಕಡೆಗಳಲ್ಲಿ ಸುರಂಗ ಮಾರ್ಗದ ರೀತಿಯಲ್ಲಿ ಕಂಡು ಬರುತ್ತಿದೆ ಎಂದಿದ್ದಾರೆ. ಗುಹೆ ಪತ್ತೆಯಾದ ಸುದ್ದಿ ತಿಳಿದ ನಾಗರಿಕರು ಗುಹೆಯ ಬಳಿ ಜಮಾಯಿಸಿದಾಗ ಕೆಲ ಹೊತ್ತು ಇಲ್ಲಿ ರಸ್ತೆಸಂಚಾರ ಅಸ್ತವ್ಯಸ್ತವಾಗಿತ್ತು. ಇದೇ ಗುಹೆಯು ಕಳೆದ ಮೂರು ವರ್ಷಗಳ ಹಿಂದೆ ಪತ್ತೆಯಾದ ಗುಹೆಯಾದ ಗುಹೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ರಸ್ತೆ ಸಮೀಪವೇ ಈ ಗುಹೆ ಪತ್ತೆಯಾಗಿರುವುದರಿಂದ ರಸ್ತೆ ಅಗಲೀಕರಣ ಕಾಮಗಾರಿ ನಡೆಸುವ ವೇಳೆ ಕುಸಿದು ಬೀಳುವ ಸಂಭವ ಇದ್ದು ರಸ್ತೆ ಅಗಲೀಕರಣದ ಕಾರ್ಮಿಕರು ಆತಂಕದಿಂದಲೇ ಕೆಲಸ ಮುಂದುವರಿಸಿದ್ದಾರೆ.