ನನ್ನನ್ನು ಕೆಣಕಬೇಡಿ: ಮೊಯ್ಲಿಗೆ ಪೂಜಾರಿ ಎಚ್ಚರಿಕೆ ಕಾಂಗ್ರೆಸ್ ಬಣ ರಾಜಕೀಯ ಬಹಿರಂಗ

Update: 2016-02-14 12:54 GMT

ಮಂಗಳೂರುಫೆ.14: ನನ್ನ ಕೆಣಕಬೇಡಿ . ಮತ್ತೆ ನನ್ನ ಬಗ್ಗೆ ಮಾತಾಡಿದ್ರೆ ಚುನಾವಣೆ ಮುಗಿದ ಬಳಿಕ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯ ಬಗ್ಗೆ ಎಲ್ಲಾ ವಿಚಾರಗಳನ್ನು ಬಿಚ್ಚಿಡುತ್ತೇನೆ ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರು ತಮ್ಮ ದುಬಾರಿ ವಾಚನ್ನು ಹರಾಜು ಹಾಕಬೇಕೆಂದು ನಾನು ಹೇಳಿದುದರಲ್ಲಿ ತಪ್ಪಿಲ್ಲ. ಈ ಹೇಳಿಕೆಯ ಹಿನ್ನೆಲೆಯಲಿ ಸಿದ್ದರಾಮಯ್ಯನವರು ಇಂದು ವಾಚ್ ಹರಾಜು ಮಾಡುವ ಹೇಳಿಕೆಯನ್ನು ನೀಡಿದ್ದಾರೆ. ಹಿರಿಯರಾಗಿರುವ ವೀರಪ್ಪ ಮೊಯಿಲಿ ಸಿದ್ದರಾಮಯ್ಯನವರಿಗೆ ಹೇಳಬೇಕಿತ್ತು. ನಾನು ನೀಡಿದ ಹೇಳಿಕೆಗೆ ವೀರಪ್ಪ ಮೊಯಿಲಿಯವರು ವಿರೋಧ ವ್ಯಕ್ತಪಡಿಸಿದ್ದು ನೋಡಿದರೆ ಅವರ ಬಗ್ಗೆಯೂ ಸಂಶಯ ಮೂಡುತ್ತದೆ ಎಂದು ಹೇಳಿದರು. ನನ್ನನ್ನು ವಯಸ್ಸಾಗಿದೆ ಎಂದು ಹೇಳುವ ಮೊಯಿಲಿ ತಮ್ಮ ವಯಸ್ಸನ್ನು ಲೆಕ್ಕ ಹಾಕಿದ್ದಾರೆಯೆ ಎಂದು ಪ್ರಶ್ನಿಸಿದ ಅವರು ಅವರು ತಮ್ಮನ್ನು ಸಣ್ಣ ಮಗುವೆಂದು, 21 ವರ್ಷದ ಯುವಕನೆಂದು , ಕಲಿಯುಗದ ಬ್ರಹಸ್ಪತಿಯೆಂದು, ಮಹಾಜ್ಞಾನಿಯೆಂದು ತಿಳಿದಿದ್ದಾರೆ. 1946ರಲ್ಲಿ ಜನಿಸಿದ ವೀರಪ್ಪ ಮೊಯಿಲಿಯವರಿಗೆ 77 ವಯಸ್ಸು ಆಗಿದ್ದು ನನಗೆ ವಯಸ್ಸಾಗಿದೆ ಎಂದು ಹೇಳುವ ಮೊಯಿಲಿ ವಯಸ್ಸಾದ ನಂತರ ಚುನಾವಣಾ ಪ್ರಚಾರಕ್ಕೆ ಯಾಕೆ ಹೋಗುತ್ತಿದ್ದಾರೆ ಎಂದು ಹೇಳಿದರು.

    ಧಾರವಾಡದಲ್ಲಿ ಬಿಜೆಪಿಯ ಜಿ.ಪಂ ಅಭ್ಯರ್ಥಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಷಿ ಮಾಡಿರುವ ಪ್ರತಿಭಟನೆ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆದಿರುವ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಜನಾರ್ದನ ಪೂಜಾರಿ ಬಿಜೆಪಿ ನಾಯಕರು ಕರ್ನಾಟಕದ ಜನತೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪಾಠವನ್ನು ಹೇಳುತ್ತಿದ್ದಾರೆ. ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ , ಮೋದಿ ಅಲೆಯಿಲ್ಲದೆ ಇರುವುದರಿಂದ ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದೀರಿ. ಗಲಭೆಯೆಬ್ಬಿಸಿ ಚುನಾವಣೆಗೆ ಹೋದರೆ ಕರ್ನಾಟಕದ ಜನತೆ ಒಪ್ಪುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಬಿಜೆಪಿ ಮತ್ತು ಸಂಘಪರಿವಾರಕ್ಕೆ ಶಾಂತಿ ಕದಡುವುದು ಅಭ್ಯಾಸವಾಗಿದೆ. ಕಾಂಗ್ರೆಸ್ ಪಕ್ಷ ಶಾಂತಿಗೋಸ್ಕರ ಪ್ರಾಣ ಕೊಡಲು ಸಿದ್ದವಾಗಿದೆ ಎಂದು ಹೇಳಿದರು.

 ಕುಮಾರಸ್ವಾಮಿಯ ಕಲ್ಲಡ್ಕದ ಚರಿತ್ರೆ ಎಲ್ಲರಿಗೂ ಗೊತ್ತಿದೆ:

 ಮುಖ್ಯಮಂತ್ರಿಗಳ ಮೂರು ಕೋಟಿ ವೆಚ್ಚದ ಹಗರಣದ ಬಗ್ಗೆ ಬಯಲು ಮಾಡುವೆ ಎಂದಿರುವ ಕುಮಾರಸ್ವಾಮಿಯ ಹೇಳಿಕೆಗೆ ಪ್ರತಿಕ್ರೀಯಿಸಿದ ಜನಾರ್ದನ ಪೂಜಾರಿ ಕುಮಾರಸ್ವಾಮಿ ಚರಿತ್ರೆಯೇನು ಎಂಬುದು ಎಲ್ಲರಿಗೂ ಗೊತ್ತಿದೆ. ಕರಾವಳಿಯ ಜನರಿಗೆ ಅವರ ಎಲ್ಲ ವಿಚಾರಗಳು ಗೊತ್ತಿದೆ. ಕಲ್ಲಡ್ಕದ ಚರಿತ್ರೆಯೂ ಜನರಿಗೆ ಗೊತ್ತಿದೆ. ಮಾದರಿಯಾದ ಜೀವನವನ್ನು ಕುಮಾರಸ್ವಾಮಿ ನಡೆಸಿಲ್ಲ ಎಂದು ಟೀಕಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸುಧೀರ್ ಟಿ.ಕೆ, ನವೀನ್ ಡಿಸೋಜ, ಸರಳಾ ಕರ್ಕೇರಾ ,ದೀಪಕ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News